ನೀತಿಸಂಹಿತೆ ಇದ್ದರೂ ರಾರಾಜಿಸುತ್ತಿವೆ ಜಾಹೀರಾತು
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮಾ. 6
ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿ ಮಾಡಿರುವ ಬೆನ್ನಲ್ಲೆ ರಾಜ್ಯ ಸರ್ಕಾರದ ಅನೇಕ ಯೋಜನೆಗಳ ಜಾಹೀರಾತುಗಳನ್ನು ಮಾ. 5ರಂದು ತೆರವುಗೊಳಿಸಬೇಕಿತ್ತು. ಆದರೂ ಕೆಲ ಕಡೆಗಳಲ್ಲಿ ಇನ್ನು ಸರ್ಕಾರಿ ಜಾಹಿರಾತುಗಳು ರಾರಾಜಿಸುತ್ತಿವೆ.
ಈಗಾಗಲೆ ಮುಖ್ಯ ರಸ್ತೆಗಳಲ್ಲಿ ಹಾಕಲಾಗಿದ್ದ ವಿವಿಧ ಪಕ್ಷಗಳ ನಾಯಕರ ಬ್ಯಾನರ್, ಬಂಟಿಂಗ್ಸ್ಗಳನ್ನು ತೆರವುಗೊಳಿಸಲಾಗಿದೆ. ಉಳಿದಂತೆ ತಾಲೂಕು ಪಂಚಾಯಿತಿ ಆವರಣದಲ್ಲಿ ಹಾಕಲಾಗಿರುವ ವಾರ್ತಾ ಇಲಾಖೆಯ ಪ್ರಕಟಣೆ ಮನಸ್ವಿನಿ ಎಂಬ ಯೋಜನೆಯ ಜಾಹೀರಾತಿನಲ್ಲಿ ಸಿಎಂ ಹಾಗೂ ಇಲಾಖೆ ಸಚಿವರ ಭಾವಚಿತ್ರಗಳಿಗೆ ಮಾತ್ರ ಹಾಳೆ ಅಂಟಿಸಿದ್ದಾರೆ. ಆದರೆ ಯೋಜನೆಯ ಮಾಹಿತಿ ಒಳಗೊಂಡಿರುವ ಜಾಹೀರಾತು ಇನ್ನು ಹಾಗೆಯೆ ಇದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಭಾವಚಿತ್ರ ಒಳಗೊಂಡಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮ ಸೇರಿದಂತೆ ಇತರೆ ಯೋಜನೆಗಳ ಜಾಹೀರಾತುಗಳು ಆಸ್ಪತ್ರೆಯ ತುಂಬೆಲ್ಲ ಇನ್ನೂ ನೇತಾಡುತ್ತಿವೆ. ವೈದ್ಯಾಧಿಕಾರಿಗಳು ಚುನಾವಣೆ ನೀತಿಸಂಹಿತೆ ಪಾಲನೆ ಮಾಡುವ ಗೋಜಿಗೆ ಹೋಗಿಲ್ಲ. ಈ ಕುರಿತು ತಾಲೂಕು ವೈದ್ಯಾಧಿಕಾರಿಯನ್ನು ಸಂಪರ್ಕಿಸಿದಾಗ ಈ ಕೂಡಲೆ ಚುನಾವಣೆ ನೀತಿಸಂಹಿತೆಗೆ ಒಳಪಡುವ ಎಲ್ಲ ಜಾಹೀರಾತುಗಳನ್ನು ತೆರವುಗೊಳಿಸಲು ತಿಳಿಸುತ್ತೇವೆಂದು ಹೇಳುತ್ತಾರೆ.
ಮರಳಿಗೂ ಅಡ್ಡಿಯಾಯ್ತು ನೀತಿಸಂಹಿತೆ: ಹೊಸ ಮರಳು ನೀತಿಗೆ ಚುನಾವಣೆ ನೀತಿಸಂಹಿತೆ ಅಡ್ಡಿಯಂತೆ... ಹಾಗಾಗಿ ತಾಲೂಕಿನ ಹೂನ್ನೂರು ಹಳ್ಳದ ಬಳಿ ನಿರ್ಮಾಣ ಮಾಡಲಾಗಿರುವ ಸರ್ಕಾರಿ ಮರಳಿನ ಸ್ಟಾಕ್ಯಾರ್ಡ್ಗೆ ಬೀಗ ಹಾಕಿ, ಯಾವ ಲಾರಿಗೂ ಮರಳಿನ ಪಾಸ್ ವಿತರಣೆ ಮಾಡುವುದಿಲ್ಲ. ಮಾ. 5ರಂದು ತಾಲೂಕು ಕಚೇರಿಯಲ್ಲಿ ನಡೆದ ಚುನಾವಣೆ ಸಭೆಯ ನಿರ್ಣಯದಂತೆ ಮರಳು ಪರವಾನಗಿ ನಿಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ನೋಟಿಸ್ ಅಂಟಿಸಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ವಿವಿಧ ಕಡೆಗಳಿಂದ ಸಾಕಷ್ಟು ಮರಳಿನ ಬೇಡಿಕೆ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ತೀರದ ನವಲಿ, ಹೊನ್ನೂರಿನ 6 ಮರಳಿನ ಬ್ಲಾಕ್ಗಳಲ್ಲಿನ ಮರಳನ್ನು ಸರ್ಕಾರಿ ಸ್ಟಾಕ್ಯಾರ್ಡ್ನಲ್ಲಿ ಸಂಗ್ರಹಿಸಲಾಗಿದೆ. ಲಾರಿ ಮಾಲೀಕರು ಲಾರಿಗಳನ್ನು ತಂದು ನೋಟಿಸ್ ನೋಡಿ ವಾಪಾಸ್ ಹೋಗುತ್ತಿದ್ದಾರೆ. ಮರಳಿಗೂ ಚುನಾವಣೆ ನೀತಿಸಂಹಿತೆಗೂ ಯಾವ ಸಂಬಂಧ? ಇದರಿಂದ ಯಾವ ತೊಂದರೆ ಉಂಟಾಗಲಿದೆ? ಸರ್ಕಾರಿ ಸ್ಟಾಕ್ಯಾರ್ಡ್ನಲ್ಲಿನ ಮರಳನ್ನು ನಂಬಿಕೊಂಡು ನೂರಾರು ಸರ್ಕಾರಿ ಕಾಮಗಾರಿಗಳು, ಖಾಸಗಿ ಕಟ್ಟಡಗಳ ಮಾಲೀಕರು ಮತ್ತು ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದಾರೆ. ಆದರೆ ಮರಳೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ. ಈ ಕುರಿತು ಲೋಕೋಪಯೋಗಿ ಎಇಇ ಅವರನ್ನು ಸಂಪರ್ಕಿಸಿದಾಗ, ತಾಲೂಕು ಮಟ್ಟದ ಚುನಾವಣೆ ನೀತಿಸಂಹಿತೆ ಸಭೆಯಲ್ಲಿ ತೀರ್ಮಾನಿಸಿದಂತೆ ಮರಳು ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ವಿಜಯಕುಮಾರ್, ಮರಳು ಪರವಾನಗಿ ನೀಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಚುನಾವಣೆ ನೀತಿಸಂಹಿತೆ ಕುರಿತು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಮೇಲಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಆದರೆ ಅದೇನೆ ಇರಲಿ ಚುನಾವಣೆಗೂ ಮರಳು ಪರವಾನಗಿಗೂ ಏನು ಸಂಬಂಧ ಎಂಬ ಪ್ರಶ್ನೆ ಜನತೆಗೆ ಕಾಡುತ್ತಿದೆ.