ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 7 Mar 2014, 10:31 am

ಇಂದು ಚಿಗುರು, ಸೌರಭ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬಾಲ ಪ್ರತಿಭೆಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಮಾ. 7ರಂದು ಬೆಳಗ್ಗೆ 11.30ಕ್ಕೆ ಜಿಲ್ಲೆಯ ಸಂಡೂರು ತಾಲೂಕು ತೊಣಸಿಗೇರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಗುರು ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಕೆ. ತೊಣಿಸಿಗೇರೆಯ ಸಿಂಧೂ ಭಾವಗೀತೆ ಗಾಯನ ಪ್ರಸ್ತುತಪಡಿಸಲಿದ್ದಾರೆ. ಅದೇ ರೀತಿ ಅಂದು ಮಧ್ಯಾಹ್ನ 3ಕ್ಕೆ ಸಂಡೂರು ತಾಲೂಕು ಯಶವಂತ್‌ನಗರ ಉಜ್ಜನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಸೌರಭ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಡೂರು ತಾ. ಯಶವಂತ್ ನಗರದ ಕಲ್ಲಯ್ಯ ಬಿ. ಮತ್ತು ತಂಡದವರು ಜಾನಪದ ನೃತ್ಯ ಪ್ರದರ್ಶಿಸಲಿದ್ದಾರೆ. ನಂತರ ಚಿಗುರು ಕಾರ್ಯಕ್ರಮದಡಿ ಎ.ಟಿ. ಪ್ರಕಾಶ್ ಜಾನಪದ ಗೀತೆ ಗಾಯನ ಮಾಡಲಿದ್ದಾರೆ ಎಂದು ಇಲಾಖೆಯ ಬಿ. ನಾಗರಾಜ್ ತಿಳಿಸಿದ್ದಾರೆ.
ನಾಳೆ ಸಾಮಾನ್ಯ ಸಭೆ
ಹೂವಿನಹಡಗಲಿ: ತಾಲೂಕು ವೀರಶೈವ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಾಮಾನ್ಯ ಸಭೆ ಮಾ. 8ರಂದು ಮಧ್ಯಾಹ್ನ 2ಕ್ಕೆ ಪಟ್ಟಣದ ಗೋಣಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಸಭೆಯಲ್ಲಿ ನೌಕರರ ಕುಂದುಕೊರತೆ ಬಗ್ಗೆ ಚಚಿಂಸುವುದು ಮತ್ತು ತಾಲೂಕು ನೌಕರರ ಘಟಕದ ಪುನಾರಚನೆ ಮಾಡಲಾಗುವುದು. ಸಭೆಯಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಉತ್ತಂಗಿ ರವಿ, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜಿ. ಪಾಟೀಲ್, ತಾಲೂಕು ಘಟಕದ ಅಧ್ಯಕ್ಷ ಸಿ. ಚಂದ್ರಪ್ಪ ಹಾಗೂ ಪದಾಧಿಕಾರಿಗಳು ಭಾಗವಹಿಸುವರು. ಸಮಾಜದ ನೌಕರ ಬಾಂಧವರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಬೇಕೆಂದು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಿ. ಜಯಪ್ರಕಾಶ್ ಕೋರಿದ್ದಾರೆ.
ಸಚಿವರಿಗೆ ಮನವಿ
ಬಳ್ಳಾರಿ: ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘದ ಜಿಲ್ಲಾ ವಿಭಾಗವು ಈಚೆಗೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ. ಬಳ್ಳಾರಿಗೆ ಆಗಮಿಸಿದ್ದ ಸಾರಿಗೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ನಿಗಮದಿಂದ ನಿಗಮಕ್ಕೆ ವರ್ಗಾವಣೆಗೆ ಅವಕಾಶ ನೀಡಬೇಕು. ಎಲ್ಲ ವಿಭಾಗಗಳಲ್ಲಿನ ಖಾಲಿ ಹುದ್ದೆಗಳಿಗೆ ನೇಮಕ ಮಾಡಬೇಕು. ಅನಧಿಕೃತವಾಗಿ ಚಲಿಸುವ ಖಾಸಗಿ ವಾಹನಗಳನ್ನು ನಿಯಂತ್ರಿಸಬೇಕು. ಎಸ್ಮಾ ಕಾಯಿದೆ ಜಾರಿಗೆ ತರಕೂಡದು. 2012ರ ಕೈಗಾರಿಕಾ ಒಪ್ಪಂದದಲ್ಲಿನ 42 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ. ನೌಕರರಿಗೆ ಬರಬೇಕಾದ ಬಾಕಿಯಿರುವ ತುಟ್ಟಿಭತ್ಯೆಯ ಹಿಂಬಾಕಿ ಮೊತ್ತವನ್ನು ಮಂಜೂರು ಮಾಡಬೇಕು. ನಿವೃತ್ತಿ ಹೊಂದಿರುವ ನೌಕರರಿಗೆ ಬಾಕಿ ಇರುವ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಎಚ್.ಎ. ಆದಿಮೂರ್ತಿ, ಪ್ರಧಾನ ಕಾರ್ಯದರ್ಶಿ ಕಾಂತಯ್ಯ ಗುತ್ತರಗಿಮಠ, ಪದಾಧಿಕಾರಿಗಳಾದ ಶಿವಕುಮಾರ್, ಟಿ. ಚನ್ನಪ್ಪ, ಜಡೇಗೌಡ ಸೇರಿದಂತೆ ಇತರರು ಇದ್ದರು.

ಸಿಮೆಂಟ್ ರಸ್ತೆ ಕಾಮಗಾರಿಗೆ ಜಿನಗಾ ಚಾಲನೆ
ಬಳ್ಳಾರಿ: ವಿಧಾನಪರಿಷತ್ ಸದಸ್ಯರ ಅನುದಾನದ ರು. 12 ಲಕ್ಷ ವೆಚ್ಚದಲ್ಲಿ ಬಳ್ಳಾರಿಯ ಬಸವೇಶ್ವರ ನಗರದ 3 ಮತ್ತು 4ನೇ ತಿರುವಿನ ಸಿಮೆಂಟ್ ರಸ್ತೆ ಕಾಮಗಾರಿಗೆ ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಸೋಮವಾರ ಬೆಳಗ್ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿನಗಾ, 220 ಮೀಟರ್ ಉದ್ದದ, 4 ಮೀಟರ್ ಅಗಲದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಭೂಸೇನಾ ನಿಗಮದವರಿಗೆ ಈ ಕಾಮಗಾರಿ ವಹಿಸಿಕೊಡಲಾಗಿದ್ದು, 15 ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದರು. ರಾಜಕೀಯ ಕುರಿತಾಗಿ ಮಾತನಾಡಿದ ಅವರು, ಈ ಹಿಂದೆ ಗೊಂದಲದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಬಿಜೆಪಿಯೊಂದಿಗೆ ಮಮಕಾರ ಉಳಿಸಿಕೊಂಡು ಹೋಗಲಾಗಿತ್ತು. ಎಲ್ಲರಿಗೂ ರಛಾಷ್ಟ್ರದ ಹಿತದೃಷ್ಟಿಯಿಂದ ಬಿಜೆಪಿಗೆ ಸೇರುವುದು ಅಗತ್ಯವಿದೆ, ಮೋದಿ ಪ್ರಧಾನಿಯಾಗಬೇಕೆಂಬ ಬಯಕೆ ಎಲ್ಲರದಾಗಿದೆ, ಬಿಜೆಪಿಗೆ ಸೇರಬೇಕೆಂಬ ಒಲವು ಬಹುತೇಕ ಕಾರ್ಯಕರ್ತರು, ಮುಖಂಡರದಾಗಿದೆ. ಇದೀಗ ಬಿಜೆಪಿಗೆ ಹೋಗುತ್ತಿರುವುದು ಸಮಾಧಾನ ಮತ್ತು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬುದು ನನ್ನ ಅನಿಸಿಕೆ ಎಂದರು. ಜಿಪಂ ಸದಸ್ಯ ಗೋನಾಳ್ ರಾಜಶೇಖರ್‌ಗೌಡ, 20ನೇ ವಾರ್ಡಿನ ಪಾಲಿಕೆ ಸದಸ್ಯ ಮಲ್ಲನಗೌಡ,  ಬಿಜೆಪಿ ಮುಖಂಡ ಗುತ್ತಿಗನೂರು ವಿರೂಪಾಕ್ಷಗೌಡ, ಆಲ್ದಳ್ಳಿ ಬಸವರಾಜ, ಮುದ್ದನಗೌಡ, ಶ್ರೀಧರಗಡ್ಡೆ ಎರ್ರಿಸ್ವಾಮಿ, ಕಮ್ಮರಚೇಡು ವೀರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement