ಎಸ್ವಿಇಎಂಎಸ್ ಶಾಲೆ ವಿರುದ್ಧ ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ. 7
ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಿಯಮ ಬಾಹಿರ ಶುಲ್ಕ ವಸೂಲಾತಿ ಕುರಿತು ಪಾಲಕರು 8 ತಿಂಗಳಿಂದ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಈಗ ಶಾಲಾ ಆಡಳಿತ ಮಂಡಳಿ ಶುಲ್ಕ ಪಾವತಿಸುವಂತೆ ಪಾಲಕರಿಗೆ ನೋಟಿಸ್ ನೀಡಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಎಸ್ವಿಇಎಂಎಸ್ ಶಾಲೆ ಪಾಲಕರ ಹೋರಾಟ ಸಮಿತಿ ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಆಡಳಿತ ಮಂಡಳಿ ನಿಯಮ ಬಾಹಿರವಾಗಿ ಶುಲ್ಕ ವಸೂಲಾತಿ ಮಾಡುತ್ತಿರುವ ಕುರಿತು ಪಾಲಕರ ಸಮಿತಿ ಬಿಇಒ ಹಾಗೂ ಡಿಡಿಪಿಐಗೆ ಮನವಿ ಸಲ್ಲಿಸಿತ್ತು. ಶಾಲೆಗೆ ಭೇಟಿ ನೀಡಿ, ಡಿಡಿಪಿಐ ವಿಚಾರಣೆ ನಡೆಸಿದಾಗಲೂ ಆಡಳಿತ ಮಂಡಳಿ, ನಿಯಮಾನುಸಾರವೇ ಶುಲ್ಕ ಸಂಗ್ರಹಿಸುತ್ತಿದ್ದು, ಹೆಚ್ಚುವರಿ ಶುಲ್ಕ ಮರುಪಾವತಿ ಮಾಡುವ ಪ್ರಶ್ನೆಯೇ ಬರುವುದಿಲ್ಲವೆಂದು ವಿವರಣೆ ನೀಡಿತ್ತು. ಆದರೆ, ಡಿಡಿಪಿಐ ನೀಡಿದ ಅಂತಿಮ ಆದೇಶ ಪಾಲಿಸದ ಶಾಲೆ ಆಡಳಿತ ಮಂಡಳಿ, ವಸೂಲಿ ಮಾಡಿದ ಹೆಚ್ಚುವರಿ ಶುಲ್ಕವನ್ನು ಪಾಲಕರಿಗೆ ಮರಳಿಸದೆ, ತಾನು ನಿಗದಿ ಮಾಡಿದ ಶುಲ್ಕ ಪಾವತಿಸುವಂತೆ ಪಾಲಕರ ಮೇಲೆಯೇ ಒತ್ತಡ ಹೇರುತ್ತಿದೆ. ಶುಲ್ಕ ಕಟ್ಟದ ಪಾಲಕರಿಗೆ ನೋಟಿಸ್ ಜಾರಿ ಮಾಡಿದೆ. ತಕ್ಷಣ ಶುಲ್ಕ ಪಾವತಿಸದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ.
ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರ ಶುಲ್ಕ ವಿವಾದ ಕುರಿತಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಶುಲ್ಕ ಪಾವತಿಸುವಂತೆ ಪಾಲಕರ ಮೇಲೆ ಒತ್ತಡ ಹೇರಿ, ನೋಟಿಸ್ ಜಾರಿ ಮಾಡಿರುವ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೂಳ್ಳಬೇಕು ಎಂದು ಪಾಲಕರ ಸಮಿತಿ ಆಗ್ರಹಿಸಿತು.
ಶುಲ್ಕ ವಿವಾದ ಬಗೆಹರಿಯುತ್ತಿಲ್ಲ. ಶಾಲಾ ಆಡಳಿತ ಮಂಡಳಿ ಪಾಲಕರಿಗೆ, ಮಕ್ಕಳಿಗೆ ಆಗಾಗ ಕಿರಿಕಿರಿ ಮಾಡಿ, ಮಾನಸಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಈ ಬಗ್ಗೆ ಮುತುವರ್ಜಿ ವಹಿಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಲಾಯಿತು.
ಬಸವರಾಜ ಶೀಲವಂತರ, ಎಸ್.ಎ. ಗಫಾರ್, ವಿಠ್ಠಪ್ಪ ಗೋರಂಟ್ಲಿ, ಗೋವಿಂದರಾವ್ ಪದಕಿ, ಶಶಿಧರ ಪುರಂದರ, ಪ್ರಕಾಶ ಕಂದಕೂರ, ಶರಣಪ್ಪ ಕೊತಬಾಳ್, ಭೀಮಪ್ಪ ಕುರಿ ಇದ್ದರು.