ಕೈ, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ
ಕೊಪ್ಪಳ: ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಕ್ರಮ ಸ್ವಾಗತಿಸಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಗಣ್ಣ ಕರಡಿ ಸಮ್ಮುಖದಲ್ಲಿ ತಾಲೂಕಿನ ಮಾದನೂರ, ಕಲಕೇರಿ ಗ್ರಾಪಂ ಸದಸ್ಯರು ಹಾಗೂ ಹಲವು ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರಿದರು. ಕೊಪ್ಪಳ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಂಗಣ್ಣ ಕರಡಿ ಕಾರ್ಯಕರ್ತರನ್ನು ಬರಮಾಡಿಕೊಂಡರು. ಗ್ರಾಪಂ ಉಪಾಧ್ಯಕ್ಷ ಕಲಿಕೇರಿ ಪರಸಪ್ಪ ರಾಠೋಡ, ಮಾಜಿ ಅಧ್ಯಕ್ಷ ಶಿವಣ್ಣ ಒಂಟೆತ್ತಿನವರ್, ಸದಸ್ಯರಾದ ಗೋವಿಂದಪ್ಪ ಕಾತರಕಿ ಚಿಲವಾಡಿಗಿ, ಈರಪ್ಪ ಕಾತರಕಿ, ಗವಿಸಿದ್ದಪ್ಪ ಮೆತ್ತಗಲ್ ಬುಡಶೆಟ್ಟನಾಳ, ವಿರೂಪಾಕ್ಷಪ್ಪಗೌಡ ಈಳಿಗೇರ, ಗಿರಿಯಪ್ಪ ಸಂಗನಾಳ, ಪರಸಪ್ಪ ರಾಠೋಡ, ಶಂಕರಪ್ಪ ಮಂಗಳೂರ ಬಿಜೆಪಿ ಸೇರಿದರು. ತಾಪಂ ಸದಸ್ಯ ರಮೇಶ ಚೌಡ್ಕಿ, ಪಕ್ಷದ ತಾಲೂಕಾಧ್ಯಕ್ಷ ಕೊಟ್ರೇಶ ಶೇಡ್ಮಿ, ಧುರೀಣ ಮಲ್ಲಪ್ಪ ಬೇಲೇರಿ, ವಿರೂಪಾಕ್ಷಗೌಡ ಕಲ್ಲಕೇರಿ, ಶಿವಪ್ಪ ಲಮಾಣಿ, ಗಿರಿಯಪ್ಪ ಸಂಗನಾಳ, ಮಲ್ಲಪ್ಪ ಸಜ್ಜನ್ ವಕೀಲರು, ಇಂದಿರೇಶ ರಾಠೋಡ, ಹನುಮಂತಪ್ಪ ಕುಟುಗನಹಳ್ಳಿ, ಈರಪ್ಪ ಮೊಯ್ಲಿ, ಪರಸಪ್ಪ ರಾಠೋಡ, ಚಂದ್ರಶೇಖರಗೌಡ ಪಾಟೀಲ್ ಹಲಗೇರಿ, ಪರಮಾನಂದ ಯಾಳಗಿ ಉಪಸ್ಥಿತರಿದ್ದರು.
ರಾಮಕೃಷ್ಣ ಪರಮಹಂಸರ ಜಯಂತಿ
ಕೊಪ್ಪಳ: ಶ್ರೀ ರಾಮಕೃಷ್ಣ ಪರಮಹಂಸರ 179ನೇ ಜನ್ಮ ದಿನೋತ್ಸವ ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮಾ. 9ರಂದು ಸಂಜೆ 6 ಗಂಟೆಗೆ ಜರುಗಲಿದೆ. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಚೈತನ್ಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅವಿವ್ ಲೈಫ್ ಇನ್ಶೂರೆನ್ಸ್ ಕಂಪನಿ ಮುಖ್ಯ ಪ್ರಾದೇಶಿಕ ತರಬೇತಿದಾರ ರಮೇಶ ಉಮಾರಾಣಿ ಉಪನ್ಯಾಸ ನೀಡಲಿದ್ದಾರೆ. ಕಿರ್ಲೋಸ್ಕರ್ ಎಂಡಿ ಆರ್.ವಿ. ಗುಮಾಸ್ತೆ, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ ಭೂಮರೆಡ್ಡಿ, ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ, ಹೇಮರಾಜ ಶರ್ಮಾ ಪಾಲ್ಗೊಳ್ಳುವರು. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಪ್ರಹ್ಲಾದ್ ಆಚಾರ್ 'ಬೆರಳೇ ಕುಂಚ - ನೆರಳೇ ಬಣ್ಣ' ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು ಎಂದು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ತಿಳಿಸಿದೆ.
ಹಣವಾಳದಲ್ಲಿ ವಿಷಲ್ ಅಭಿಯಾನ
ಗಂಗಾವತಿ: ನಿರ್ಮಲ ಭಾರತ ಯೋಜನೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ವೈಯುಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸಂಬಂಧಿಸಿ, ತಾಲೂಕಿನ ಹಣವಾಳ ಗ್ರಾಮದಲ್ಲಿ ಗ್ರಾಪಂ ವತಿಯಿಂದ ವಿಷಲ್ ಅಭಿಯಾನ ನಡೆಸಲಾಯಿತು. ತಾಪಂ ಸದಸ್ಯೆ ಅನ್ನಪೂರ್ಣಮ್ಮ ಹಾಗೂ ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ಸೋಮನಾಥ ಚಾಲನೆ ನೀಡಿದರು. ಮನೆ ಮನೆಗೆ ತೆರಳಿ, ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು. ಪಿಡಿಒ ರವೀಂದ್ರ, ಸದಸ್ಯರಾದ ಈರಣ್ಣ ಕುರಿ, ಮಲ್ಲಯ್ಯ, ಈರೇಶಪ್ಪ, ಬಸವರಾಜ ಉಪಸ್ಥಿತರಿದ್ದರು.