ಚುನಾವಣೆ ನೀತಿಸಂಹಿತೆ ಜಾರಿ: ಬ್ಯಾನರ್ಗಳ ತೆರವು
ಕೊಪ್ಪಳ: ದೇಶಾದ್ಯಂತ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳು ಸರ್ಕಾರಿ ಯೋಜನೆಗಳ ಬ್ಯಾನರ್ಗಳನ್ನು ತೆರವು ಮಾಡಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಆಗುತ್ತಿರುವ ಬಗ್ಗೆ ಕನ್ನಡಪ್ರಭ ಮಾ. 7ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತಿರುವ ಜಿಲ್ಲಾಡಳಿತ, ಅಲ್ಲಲ್ಲಿ ಅಳವಡಿಸಿದ್ದ ಸರ್ಕಾರಿ ಯೋಜನೆಗಳ ಪ್ರಚಾರ ಸಾಮಗ್ರಿಗಳನ್ನು ತೆಗೆಸಿದೆ. ಕೊಪ್ಪಳ ತಹಸೀಲ್ದಾರ್ ಕಚೇರಿಯ ಮುಖ್ಯದ್ವಾರದಲ್ಲಿ ಅಳವಡಿಸಿದ್ದ ಅನ್ನಭಾಗ್ಯ ಯೋಜನೆಯ ಬ್ಯಾನರ್ನ್ನು ಶುಕ್ರವಾರ ತೆರವು ಮಾಡಲಾಗಿದೆ. ತಹಸೀಲ್ದಾರ್ ಕಚೇರಿ ಮುಂದೆ ಬೃಹದಾಕಾರವಾಗಿ ಅಳವಡಿಕೆ ಮಾಡಿದ್ದ ಶಿಕ್ಷಣ ಇಲಾಖೆಯ ತಿಂಗಳ ತಿರುಳು ಯೋಜನೆಯ ಬ್ಯಾನರ್ ಕೂಡ ಈಗ ತೆರವಾಗಿದೆ. ಈ ಎಲ್ಲ ಕಾರ್ಯವನ್ನು ಅಧಿಕಾರಿಗಳು ಶುಕ್ರವಾರ ಭರದಿಂದ ನಡೆಸಿದರು.
ಕೊಪ್ಪಳ: ಭಾರದ್ವಾಜ್ ಸ್ಪರ್ಧೆ
ಗಂಗಾವತಿ: ಕೊಪ್ಪಳ ಲೋಕಸಭಾ ಚುನಾವಣೆಗೆ ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಅಭ್ಯರ್ಥಿಯಾಗಿ ಕಾ. ಭಾರದ್ವಾಜ್ ಅವರನ್ನು ಘೋಷಿಸಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸನಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊಪ್ಪಳ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಮಿಕರಿಗಾಗಿ ಹಗಲಿರುಳು ದುಡಿಯುತ್ತಿರುವ, ಭ್ರಷ್ಟಾಚಾರ ಮುಕ್ತರಾದ ಭಾರದ್ವಾಜ್ ಅವರನ್ನು ಪಕ್ಷದ ಹುರಿಯಾಳಾಗಿ ಕಣಕ್ಕಿಳಿಸಲು ಪಕ್ಷದ ಕೇಂದ್ರಿಯ ಸಮಿತಿ ನಿರ್ಧರಿಸಿದೆ.