ಫಲಾನುಭವಿಗಳಿಗೆ ಚೆಕ್ ವಿತರಣೆ
ಸಿರುಗುಪ್ಪ: ಪಟ್ಟಣದ ತಾಲೂಕು ಕಚೇರಿಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಶಾಸಕ ಬಿ.ಎಂ. ನಾಗರಾಜ ಚೆಕ್ ವಿತರಿಸಿದರು. ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 91 ಮಹಿಳೆಯರಿಗೆ ತಲಾ ರು. 10,000ದಂತೆ ಒಟ್ಟು ರು. 9.10 ಲಕ್ಷ ಮೊತ್ತದ ಚೆಕ್ ವಿತರಿಸಿದರು. ಸಾಮಾಜಿಕ ಭದ್ರತಾ ಯೋಜನೆಯ 29 ಫಲಾನುಭವಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಜೂರಾದ ವೈದ್ಯಕೀಯ ನೆರವಿನ ರು. 75 ಸಾವಿರ ಪರಿಹಾರ ಚೆಕ್ನ್ನು ಫಲಾನುಭವಿ ಬೂದುಗುಪ್ಪದ ಚಂದ್ರಶೇಖರ ರೆಡ್ಡಿ ಹಾಗೂ ಕೃಷಿ ಇಲಾಖೆಯಿಂದ ಹಾವು ಕಡಿತದಿಂದ ಮೃತಪಟ್ಟ ನಾಲ್ಕು ಫಲಾನುಭವಿಗಳಿಗೆ ತಲಾ ರು. 1 ಲಕ್ಷ ಪರಿಹಾರ ಚೆಕ್ ವಿತರಿಸಿದರು. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಭಾಗ್ಯಲಕ್ಷ್ಮಿ ಬಾಂಡ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ.ಜಿ. ಚಂದ್ರಶೇಖರ್, ಉಪ ತಹಸೀಲ್ದಾರ್ ಮಲ್ಲೇಶಪ್ಪ, ಕೃಷಿ ಆಧಿಕಾರಿ ಸಿ.ಆರ್. ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೈಯದ್ ಚಾಂದ್ಬಾಷಾ ಇದ್ದರು.
ಸತ್ತವರ ವೃದ್ಧಾಪ್ಯ ವೇತನ: ದೂರು
ಹಗರಿಬೊಮ್ಮನಹಳ್ಳಿ: ತಾಲೂಕಿನ ಚಿಂತ್ರಪಳ್ಳಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಸತ್ತವರ ಹೆಸರಿನಲ್ಲಿ ಸರ್ಕಾರ ನೀಡುವ ವೃದ್ಧಾಪ್ಯ ವೇತನವನ್ನು ಲಪಾಟಯಿಸಿದ್ದಾರೆ ಎಂದು ಹೊಸಪೇಟೆ ವಿಭಾಗ ಅಂಚೆ ಸಹಾಯಕ ಅಧಿಕ್ಷಕರು ದೂರು ನೀಡಿದ್ದಾರೆ ಎಂದು ಸಿಪಿಐ ಮಲ್ಲೇಶ್ ದೊಡ್ಡಮನಿ ಶುಕ್ರವಾರ ತಿಳಿಸಿದ್ದಾರೆ. 2010-12ರ ಸಾಲಿನಲ್ಲಿ ಅಂಚೆ ಕಚೇರಿಯಿಂದ ವೇತನ ಪಡೆಯುತ್ತಿದ್ದ 15 ವೃದ್ಧರು ಸಾವನ್ನಪ್ಪಿದ್ದಾರೆ. ಆದರೆ ಇವರು ಸತ್ತಿರುವ ಬಗ್ಗೆ ಕಚೇರಿಗೆ ಮಾಹಿತಿ ನೀಡದೆ ಅವರೆಲ್ಲರೂ ಜೀವಂತವಿದ್ದಾರೆ ಎಂಬಂತೆ ದಾಖಲೆ ತೋರಿಸುತ್ತ ಇಲ್ಲಿಯವರೆಗೆ ರು. 19,400 ಹಣವನ್ನು ಬ್ರಾಂಚ್ ಪೋಸ್ಟ್ ಮಾಸ್ಟರ್ ಲಪಾಟಿಸುವ ಮೂಲಕ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಅಧಿಕ್ಷಕ ಎಸ್.ಪಿ. ರವಿ ನೀಡಿದ ದೂರಿನನ್ವಯ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು. ಸತ್ತವರನ್ನು ಜೀವಂತವಿದ್ದಾರೆ ಎಂದು ಹೇಳಿ ಪ್ರತಿ ತಿಂಗಳು ಸತ್ತವರ ಹೆಸರಿನಲ್ಲಿ ಹೆಬ್ಬೆಟ್ಟು ಒತ್ತಿ ವೇತನ ಪಡೆದಿದ್ದು ಬೆಳಕಿಗೆ ಬಂದ ಕೂಡಲೆ ಇಲಾಖೆಯವರು ದೂರು ನೀಡಿದ್ದಾರೆ ಎಂದು ಹೇಳಿದರು.