ಸ್ತ್ರೀಯರು ಒಗ್ಗಟ್ಟಾದರೆ ಸಂಘಗಳ ಬಲವರ್ಧನೆ: ಹೊನ್ನೂರಸಾಬ್
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ. 7
ಮಹಿಳೆಯರು ಒಗ್ಗಟ್ಟಿನಿಂದ ಸರ್ಕಾರದ ಸೌಲಭ್ಯ ಪಡೆಯಲು ಮುಂದಾಗಬೇಕು. ಇದರಿಂದ ಸ್ವ ಸಹಾಯ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದು ಭಾಗ್ಯನಗರ ಗ್ರಾಪಂ ಅಧ್ಯಕ್ಷ ಹೊನ್ನೂರಸಾಬ್ ಭೈರಾಪುರ ಹೇಳಿದರು.
ತಾಲೂಕಿನ ಭಾಗ್ಯನಗರ ಗ್ರಾಪಂ ಸಭಾಂಗಣದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಯೋಜನೆಯಡಿ ಕೊಪ್ಪಳ ತಾಲೂಕು ಘಟಕ ಹಾಗೂ ಗ್ರಾಪಂ ಸಹಯೋಗದಲ್ಲಿ ನಡೆದ ಮಹಿಳಾ ಸ್ವ ಸಹಾಯ ಸಂಘಗಳ ಸಾಮರ್ಥ್ಯ ಬಲವರ್ಧನೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರೋಜಾ ಬಾಕಳೆ ಮಾತನಾಡಿ, ಸ್ವ ಸಹಾಯ ಸಂಘಗಳ ಮಹಿಳೆಯರು ಕೇವಲ ಸಹಾಯಧನ ಮತ್ತು ಸುತ್ತುನಿಧಿ ಬಡ್ಡಿ ಸಹಾಯಧನಕ್ಕೆ ಸೀಮಿತವಾಗಿರದೆ, ಆರ್ಥಿಕ ಸ್ವಾವಲಂಬನೆ ಗುರಿ ಸಾಧಿಸಬೇಕು. ಸಮಾಜಮುಖಿ ಚಟುವಟಿಕೆ ಕೈಗೊಂಡು ಬದುಕನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು. ಸಂಜೀವಿನಿ ಯೋಜನಾ ಘಟಕದ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಪಿ.ಎಸ್. ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಹುಲಿಗೆಮ್ಮ ಇದ್ದರು.
ತಾಲೂಕು ಘಟಕದ ಮೇಲ್ವಿಚಾರಕ ಬಿ.ಆರ್. ಪ್ರಸನ್ನಕುಮಾರ ಮಧುಗಿರಿ ಪ್ರಾರ್ಥಿಸಿದರು. ತಾಲೂಕು ಘಟಕದ ವ್ಯವಸ್ಥಾಪಕ ಎಚ್.ಸಿ. ರಾಘವೇಂದ್ರ ಸ್ವಾಗತಿಸಿದರು.