ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ
ಹೂವಿನಹಡಗಲಿ: ಜಿಲ್ಲಾ ಅಂಧತ್ವ ಸಂಸ್ಥೆ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಸಹಯೋಗದಲ್ಲಿ ತಾಲೂಕಿನ ಹೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿತ್ತು. ಶಿಬಿರದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನವೀನಕುಮಾರ ಮಾತನಾಡಿ, ವೃದ್ಧಾಪ್ಯದಲ್ಲಿ ಕಣ್ಣಿನ ಪೊರೆ ಬರುವುದು ಸಹಜ. ಅದನ್ನು ನಿರ್ಲಕ್ಷಿಸಿದರೆ ಅಂಧತ್ವಕ್ಕೆ ಒಳಗಾಗಬೇಕಾಗುತ್ತದೆ. ಸಕಾಲದಲ್ಲಿ ಪರೀಕ್ಷೆಗೆ ಒಳಪಟ್ಟು ಪೊರೆ ತೆಗೆಸಬೇಕು. ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿಯೂ ಉಚಿತ ನೇತ್ರ ಶಸ್ತ್ರಚಿಕಿತ್ಸೆ ನಡೆಯುತ್ತವೆ. ಸಾರ್ವಜನಿಕರು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಕಣ್ಣು ಪ್ರಮುಖ ಅಂಗವಾಗಿದ್ದು, ಕುರುಡತನ ಬಂದರೆ ಜೀವನವೆ ಕತ್ತಲಾಗುತ್ತದೆ. ಕಣ್ಣಿನ ಆರೋಗ್ಯದ ಕಡೆ ಪ್ರತಿಯೊಬ್ಬರೂ ಹೆಚ್ಚು ಕಾಳಜಿ ವಹಿಸಬೇಕು ಎಂದು ಹೇಳಿದರು. ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ. ನವೀದ್ ಶಿಬಿರ ಉದ್ಘಾಟಿಸಿದರು. ಆಸ್ಪತ್ರೆಯ ನೇತ್ರಾಧಿಕಾರಿ ಕೆ. ಶ್ರೀಕಾಂತ ಉಪಸ್ಥಿತರಿದ್ದರು. ಶಿಬಿರದಲ್ಲಿ 385 ಹೊರ ರೋಗಿಗಳು ತಪಾಸಣೆಗೊಳಪಟ್ಟು,167 ಜನರು ನೇತ್ರ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು.