ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪರೀಕ್ಷೆ: ಕರೆಂಟ್ ಕೊಡಿ

Lingaraj Badiger
Updated On : 10 Mar 2014, 11:06 am

ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಏನೆಲ್ಲಾ ಯೋಜನೆಗಳನ್ನು ರೂಪಿಸಿ, ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕೋಟ್ಯಂತರ ರು. ಖರ್ಚು ಮಾಡುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಮತ್ತು ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವಲ್ಲಿ ಮಾತ್ರ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದಕ್ಕೆ ಇತ್ತೀಚಿಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡುತ್ತಿರುವುದು ಉತ್ತಮ ಉದಾಹರಣೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ.
ಈಗಾಗಲೆ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ಆರಂಭವಾಗುತ್ತಿವೆ. ವಾರ್ಷಿಕ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಸಿದ್ಧರಾಗಲು ಓದುವುದಕ್ಕಾಗಿ ಕುಳಿತರೆ ಸಂಜೆಯಿಂದ ರಾತ್ರಿವರೆಗೂ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ. ಒಂದು ವಾರ ಸಂಜೆಯಿಂದ ವಿದ್ಯುತ್ ಕಡಿತವಾದರೆ ಮತ್ತೊಂದು ವಾರ ಬೆಳಗಿನ ಜಾವದಿಂದ ಸಂಜೆವರೆಗೆ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಬೆಳಗಿನ ಜಾವದ ಅಭ್ಯಾಸಕ್ಕೆ ತೀವ್ರ ತೊಂದರೆ ಆಗುತ್ತಿದೆ ಎಂಬುದನ್ನು ಜೆಸ್ಕಾಂನವರು ಅರ್ಥ ಮಾಡಿಕೊಳ್ಳಬೇಕಿದೆ. ರಾತ್ರಿ ವೇಳೆಯಾದರೂ ಓದೋಣ ಎಂದರೆ ಸಂಜೆಯಿಂದ ರಾತ್ರಿವರೆಗೂ ವಿದ್ಯುತ್ ಇರುವುದಿಲ್ಲ. ಹೀಗಾದರೆ ವಿದ್ಯಾರ್ಥಿಗಳು ಯಾವಾಗ ಓದಿಕೊಳ್ಳಬೇಕು? ಪರೀಕ್ಷೆಯ ಸಮಯದಲ್ಲಿಯಾದರೂ ಸಮರ್ಪಕವಾದ ವಿದ್ಯುತ್ ನೀಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಕ್ಷಣವೆ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿಯವರೆಗೂ ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸದೇ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡಬೇಕು. ತಕ್ಷಣವೆ ಜೆಸ್ಕಾಂ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಸ್ಥಳೀಯ ಜನಪ್ರತಿನಿಧಿಗಳು ಜೆಸ್ಕಾಂನವರ ಗಮನ ಸೆಳೆದು ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಸ್ಪಂದಿಸಿ.
- ಕೊಟ್ಗಿ ಮಲ್ಲನಗೌಡ, ಜಿ. ನಾಗಲಾಪುರ ನಿವಾಸಿ
ಹುಚ್ಚು ಕೋತಿ ಆಟತಡೆಯೋರಾರು?
ಹುಚ್ಚು ಕೋತಿಯ ಹಾವಳಿಯು ತಾಲೂಕಿನ ಮರಿಯಮ್ಮನಹಳ್ಳಿಯ ನಾಲ್ಕನೇ ವಾರ್ಡ್ನಲ್ಲಿ ವಾರದಿಂದ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದೆ. ಮನೆಯ ಮುಂದೆ ಮಕ್ಕಳು ಆಟವಾಡುವಾಗ ಹುಚ್ಚು ಕೋತಿಯೊಂದು ಮಕ್ಕಳ ಮೇಲೆ ಜಿಗಿದು ತಲೆಯ ಕೂದಲು ಹಿಡಿದು ಕೆಳಗೆ ಬೀಳುಸುತ್ತಿದೆ. ಹಿಗೆಯೆ ಭಾನುವಾರ 2-3 ಮಕ್ಕಳಿಗೆ ಈ ಹುಚ್ಚು ಕೋತಿ ಕಡಿದು ಗಾಯಗೊಳಿಸಿದೆ. ಹುಚ್ಚು ಕೋತಿ ಊರೊಳಗೆ ಬಂದಿದೆ ಎಂದು ಕೆಲ ಹುಡುಗರು ಗುಂಪು ಕಟ್ಟಿಕೊಂಡು ಆ ಕೋತಿ ಓಡಿಸುವ ಸಾಹಸ ಮೆರೆದರು. ಆದರೆ ಆ ಕೋತಿ ಮಾತ್ರ ಒಂದು ಓಣಿಯಲ್ಲಿ ಓಡಿಸದರೆ ಮತ್ತೊಂದು ಓಣಿಗೆ ಬಂದು ಮನೆಯ ಮಾಳಿಗೆ ಮೇಲೆ ಕುಳಿತು ದೊಡ್ಡ ಧ್ವನಿಯಲ್ಲಿ ಚೀರುತ್ತದೆ. ಕೋತಿ ಚೀರುವ ಧ್ವನಿ ಕೇಳಿ ಮನೆಯ ಮುಂದೆ ಆಟ ಆಡುತ್ತಿರುವ ಹುಡುಗರು ಹೆದರಿಕೊಂಡು ಮನೆಯಲ್ಲೆ ಇರುವ ಸ್ಥಿತಿ ನಿರ್ಮಾಣವಾಗಿದೆ. ಹುಚ್ಚು ಕೋತಿ ಓಡಿಸಲು ಪಟಾಕಿ ಸಿಡಿಸಿ ಕೋತಿಗೆ ಭಯ ಹುಟ್ಟಿಸುತ್ತಿರುವ ಕಾರ್ಯ ನಡೆಸಿದರೂ ಸಹ ಮನೆಯ ಮಾಳಿಗೆ ಮತ್ತು ಮರಗಳನ್ನು ಹತ್ತಿ ಕುಳಿತು ಜನರನ್ನು ಸತಾಯಿಸುತ್ತಿದೆ. ಅಡವಿಯಲ್ಲಿರುವ ಕೋತಿಗಳು ಊರೊಳಗೆ ಬಂದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದರಿಂದ ತಕ್ಷಣ ಅರಣ್ಯ ಇಲಾಖೆಯವರು ಮರಿಯಮ್ಮನಹಳ್ಳಿಗೆ ಬಂದಿರುವ ಹುಚ್ಚು ಕೋತಿಯನ್ನು ಸೆರೆಹಿಡಿದು ಅರಣ್ಯದೊಳಗೆ ಬಿಡಬೇಕು. ಇಲ್ಲವಾದಲ್ಲಿ ಹುಚ್ಚು ಕೋತಿ ಇನ್ನೂ ಎಷ್ಟೋ ಮಕ್ಕಳನ್ನು ಕಡಿದು ಗಾಯಗೊಳಿಸುತ್ತದೆ. ಈ ಮುನ್ನ ಆ ಕೋತಿಯನ್ನು ಹಿಡಿದು, ಸಾರ್ವಜನಿಕರ ನೆಮ್ಮದಿಯನ್ನು ಅರಣ್ಯ ಇಲಾಖೆ ಕಾಪಾಡಬೇಕು.
- ನಾಗರಾಜ್, ಸಿದ್ದಲಿಂಗ, ವೀರೇಶ್,
ಮರಿಯಮ್ಮನಹಳ್ಳಿ ನಿವಾಸಿಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement