ಬಿಎಸ್ಸೆನ್ನೆಲ್ ಮಾಸಿಕ ಬಾಡಿಗೆ ಪರಿಷ್ಕರಣೆ
ಬಳ್ಳಾರಿ: ಭಾರತ ಸಂಚಾರ ನಿಗಮವು ನಗರ ಪ್ರದೇಶಗಳ ಸ್ಥಿರ ದೂರವಾಣಿಯ ಮಾಸಿಕ ಬಾಡಿಗೆ ದರವನ್ನು ಈಗ ಇರುವ ರು. 180ಗಳಿಂದ ರು. 195ಗೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ ಎಂದು ಬಿಎಸ್ಎನ್ಎಲ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ. ಈ ಪರಿಷ್ಕೃತ ದರ ಮಾರ್ಚ್ 1ರಿಂದಲೆ ಜಾರಿಗೆ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ತಮ್ಮ ಹತ್ತಿರದ ಗ್ರಾಹಕರ ಸೇವಾ ಕೇಂದ್ರಗಳನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಟಾ ಏಸ್ ಡಿಕ್ಕಿ: ಬಾಲಕಿ ಸಾವು
ಬಳ್ಳಾರಿ: ರಸ್ತೆ ದಾಟುತ್ತಿರುವಾಗ ಬಾಲಕಿಯೋರ್ವಳಿಗೆ ಟಾಟಾ ಏಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನ್ನಪ್ಪಿದ ಘಟನೆ ತಾಳೂರು ರಸ್ತೆಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಗುಡಾರ ನಗರದ ನಿವಾಸಿ ಸರಿತಾ (5) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ 4 ಗಂಟೆಗೆ ರಸ್ತೆ ದಾಟುತ್ತಿರುವಾಗ ಈ ಘಟನೆ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡ ಸರಿತಾಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿ ಪಾಯಸ ಬಿದ್ದು ಬಾಲಕಿ ಸಾವು
ಬಳ್ಳಾರಿ: ಮೈ ಮೇಲೆ ಬಿಸಿ ಪಾಯಸ ಬಿದ್ದು ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆ ಸಂಗನಕಲ್ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ವೈಷ್ಣವಿ (3) ಎಂದು ಗುರುತಿಸಲಾಗಿದೆ. ಮಾ. 5ರಂದು ಆಂಧ್ರಪ್ರದೇಶದ ಗುಳ್ಯಂ ಜಾತ್ರೆಗೆ ಹೋಗಲು ಮನೆಯಲ್ಲಿ ಪಾಯಸ ಸಿದ್ಧಮಾಡಿ, ಮನೆಯ ಹೊರಗಡೆ ಇಟ್ಟಾಗ ವೈಷ್ಣವಿಯ ಮೈ ಮೇಲೆ ಬಿಸಿ ಪಾಯಸ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು. ಈಕೆಯನ್ನು ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ವೈಷ್ಣವಿ ಭಾನುವಾರು ಸಾವನ್ನಪ್ಪಿದ್ದಾಳೆ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.