ಭಾಷೆ, ಸಂಸ್ಕೃತಿ ಉಳಿಯುವಂತಾಗಲಿ: ನಾಗರಾಜ್
ಬಳ್ಳಾರಿ: ಪ್ರಚಾರಕ್ಕಷ್ಟೆ ಕನ್ನಡ ಸೇವೆ ಸೀಮಿತವಾಗದೆ ಬೇರು ಮಟ್ಟದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಯುವಂತಾಗಬೇಕು ಎಂದು ಜೆಡಿಎಸ್ ಮುಖಂಡ ಮುಂಡರಗಿ ನಾಗರಾಜ್ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ನಗರದ ಹೀರದ ಸೂಗಮ್ಮ ಸಹಿಪ್ರಾ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿ, ಬಳ್ಳಾರಿಯಂತ ಗಡಿಭಾಗದಲ್ಲಿ ಕನ್ನಡ ಚಟುವಟಿಕೆಗಳು ಅಧಿಕವಾಗಿ ಜರುಗಬೇಕು ಎಂದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಈರಮ್ಮ, ಪ್ರಸ್ತುತ ದಿನಗಳಲ್ಲಿ ರಾಜ್ಯದ ಹಳ್ಳಿಗಳಲ್ಲಿ, ಶಾಲಾ, ಕಾಲೇಜು, ಬೀದಿ ಬೀದಿಗಳಲ್ಲಿ ಕನ್ನಡದ ಕಂಪು ಬೀರುವ ಸಮಾರಂಭ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಡೀ ವಿಶ್ವಕ್ಕೆ ಉನ್ನತ ಮಟ್ಟದ ಸಾಹಿತ್ಯ ಹಾಗೂ ಶ್ರೇಷ್ಠ ಸಂಸ್ಕೃತಿ ನೀಡಿದ ಪುಣ್ಯಭೂಮಿ ಕರುನಾಡು ಎಂದರು. ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದತ್ತಿದಾನಿ ಸಂಗನಕಲ್ಲು ಪ್ರಕಾಶ್, ಕಪ್ಪಗಲ್ಲು ರಂಜಾನ್ಸಾಬ್, ಎಚ್. ಚಂದ್ರಶೇಖರಗೌಡ, ಶಾಲಾ ಮುಖ್ಯೋಪಾಧ್ಯಾಯ ಚಾ. ಗಂಗಾಧರಯ್ಯ, ಡಿ. ನಾಗರಾಜ ಪ್ರಸಾದ ಶೆಟ್ಟಿ, ಈ. ಗೋವರ್ಧನರೆಡ್ಡಿ, ಕೋಳೂರು ಚಂದ್ರಶೇಖರಗೌಡ, ಕಸಾಪ ಮಾಜಿ ಅಧ್ಯಕ್ಷ ಎಚ್. ಹಂಪನಗೌಡ, ಶಿಕ್ಷಕರು, ಇತರರಿದ್ದರು. ಕಸಾಪ ಸದಸ್ಯ ನಾಗರಾಜಸ್ವಾಮಿ ನಿರೂಪಿಸಿ, ವಂದಿಸಿದರು.