ಮಹಿಳಾ ರಕ್ಷಣೆಗೆ ಚಿಂತನೆ ಅಗತ್ಯ
ಹೂವಿನಹಡಗಲಿ: ಮಹಿಳೆಯರ ರಕ್ಷಣೆ ಕುರಿತು ಪ್ರತಿಯೊಬ್ಬರೂ ಚಿಂತನೆ ನಡೆಸುವ ಅಗತ್ಯವಿದೆ ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ಎಂ. ಜಯದೇವಯ್ಯ ಹೇಳಿದರು. ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಅಸ್ಸಿಸಿ ಪುನರ್ ಚೇತನ ಕೇಂದ್ರ ಹಾಗೂ ಸ್ವಸಹಾಯ ಗುಂಪುಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಹಿಳಾ ದಿನಾಚರಣೆಗಳು ಕೇವಲ ಆಚರಣೆಗೆ ಸೀಮಿತವಾಗದೆ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವಲ್ಲಿ ಕಾನೂನಿನ ಅರಿವು ಅಗತ್ಯ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಹಿಳೆಯರಿಗಾಗಿ ಹತ್ತು ಹಲವು ಸೌಲಭ್ಯಗಳಿವೆ. ಮಹಿಳೆಯರು ಇಲಾಖೆಗೆ ಸಂಪರ್ಕಿಸಿ ಸದುಪಯೋಗ ಪಡೆದುಕೊಳ್ಳಿ ಎಂದರು. ವಕೀಲರಾದ ಅಂಬುಜಾ ಮಾತನಾಡಿ, ಮಹಿಳೆಯರಿಗಾಗಿ ಪ್ರತ್ಯೇಕ ಕಾನೂನುಗಳಿವೆ. ಸರ್ಕಾರ ಉಚಿತವಾಗಿ ಕಾನೂನಿನ ರಕ್ಷಣೆ ನೀಡುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆದರೆ ಕೂಡಲೆ ಉಚಿತ ಕಾನೂನಿನ ನೆರವನ್ನು ಪಡೆದುಕೊಳ್ಳಲು ಮಾಹಿತಿ ನೀಡಿದರು. ಬಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಕೊಟ್ರೇಶ ಮಾತನಾಡಿ, ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಬ್ಯಾಂಕ್ಗಳು ಯಾವಾಗಲೂ ಮಹಿಳೆಯರ ಪರವಾಗಿಯೆ ಇರುತ್ತವೆ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಯ ಮೇಲ್ವಿಚಾರಕಿ ಪ್ರೇಮಾ ಮಹಿಳೆ ಮತ್ತು ಆರೋಗ್ಯ, ಶಿಕ್ಷಕಿ ಕಾಳಮ್ಮ ಮಹಿಳೆಯರ ಶಿಕ್ಷಣ, ಮಹಿಳಾ ಸಂಘಟನೆ ಬಗ್ಗೆ ಪಾವ್ಲಾರಾಜ್ ಉಪನ್ಯಾಸ ನೀಡಿದರು. ಕಾರ್ಮೆಲ್ ಸದನದ ರಾಜೇಶ ಡಿಸೋಜಾ, ಅಸ್ಸಿಸಿ ವ್ಯವಸ್ಥಾಪಕಿ ಐಡಾ ಪ್ರಾಸಿಸ್ಟ್, ವೈದ್ಯಾಧಿಕಾರಿ ಶಿಲ್ಪಾಮೇರಿ ಉಪಸ್ಥಿತರಿದ್ದರು.
ಮಹಿಳೆಯರನ್ನು ಗೌರವಿಸಿ
ಹೊಸಪೇಟೆ: ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸಬೇಕು. ಮಹಿಳೆಯರು ಸಮಾಜದ ಅವಿಭಾಜ್ಯ ಅಂಗ. ಎಲ್ಲಿ ಮಹಿಳೆಯರಿಗೆ ಗೌರವ ಸ್ಥಾನ ಇರುತ್ತದೆಯೋ ಅಲ್ಲಿ ಶಾಂತಿ ಮತ್ತು ನೆಮ್ಮದಿ ಕಾಣಲು ಸಾಧ್ಯ ಎಂದು ಸ್ಥಳೀಯ ವಕೀಲೆ ಭಾಗ್ಯಲಕ್ಷ್ಮೀ ಭರಾಡೆ ಹೇಳಿದರು. ನಗರದಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತರುಣಿ ಮಹಿಳಾ ಅಭಿವೃದ್ದಿ ಸಂಸ್ಥೆ ಹಾಗೂ ಡಾನ್ಬಾಸ್ಕೊ ಸಂಸ್ಥೆ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಜಾಥದ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ಥಳೀಯ ಮುಖಂಡ ಪಂತರ್ ಜಯಂತ್ ಜಾಥಾ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯೂ ಸ್ವಾಭಿಮಾನ ಬೆಳೆಸಿಕೊಂಡು, ಸಂಘಟಿತರಾಗಿ ತಮ್ಮ ಮೇಲೆ ನಡೆಯುತ್ತಿರುವ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯದ ವಿರುದ್ದ ಹೋರಾಟ ನಡೆಸುವ ಮೂಲಕ ಸ್ವಾವಲಂಬಿ ಜೀವನ ಸಾಗಿಸಬೇಕಾಗಿದೆ ಎಂದರು. ತರುಣಿ ಮಹಿಳಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಸಾವಿತ್ರಿ, ತಾಯಮ್ಮದೇವಿ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಡಾನ್ ಬಾಸ್ಕೊ ಸಂಸ್ಥೆಯ ಆಡಳಿತಾಧಿಕಾರಿ ಫಾದರ್ ಸಿಜು, ಫಾದರ್ ಸೆಬಾಸ್ಟೀನ್, ತರುಣಿ ಮಹಿಳಾ ಅಭಿವೃದ್ದಿ ಸಂಸ್ಥೆ ಖಜಾಂಚಿ ಬಸಂತಿ, ಸಂಸ್ಥೆಯ ಸಲಹೆಗಾರ ಹನುಮಂತಮ್ಮ, ಸಿಸ್ಟರ್ ಸೀಮಾ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಸರಸ್ವತಿ ಪ್ರಾರ್ಥಿಸಿದರು. ಸಾವಿತ್ರಿ ಸ್ವಾಗತಿಸಿದರು. ಹೈದರ್ ನಿರೂಪಿಸಿ, ವಂದಿಸಿದರು. ನಗರದ ಎಂ.ಪಿ. ಪ್ರಕಾಶ್ ಕಲಾಮಂದಿರದಿಂದ ಜಾಥಾದ ಮೆರವಣೆಗೆ ಆರಂಭವಾಗಿ ನಗರದ ರಸ್ತೆಗಳಲ್ಲಿ ಸಂಚರಿಸಿ ಡಾನ್ಬಾಸ್ಕೋ ಸಂಸ್ಥೆಯಲ್ಲಿ ಸಭೆಯಲ್ಲಿ ಕೊನೆಗೊಂಡಿತು.