ವ್ಯಕ್ತಿತ್ವ ವಿಕಸನಕ್ಕಾಗಿಯೂ ವಿದ್ಯಾಭ್ಯಾಸ ಮಾಡಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 9
ವಿದ್ಯಾರ್ಥಿಗಳು ಕೇವಲ ರ್ಯಾಂಕ್ಗಾಗಿ ವಿದ್ಯಾಭ್ಯಾಸ ಮಾಡದೆ ವ್ಯಕ್ತಿತ್ವ ವಿಕಾಸನಕ್ಕಾಗಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಆ ಮೂಲಕ ಪ್ರತಿಭಾವಂತರಾಗಿ ಬೆಳೆಯಬೇಕು ಎಂದು ಜೆಎಸ್ಡಬ್ಲ್ಯೂ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿನೋದ್ ನಾವೆಲ್ ಹೇಳಿದರು.
ನಗರದ ವಿಜಯನಗರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂತರ್ ಕಾಲೇಜ್ ಮಟ್ಟದ ವಾಣಿಜ್ಯ ಹಬ್ಬ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಗುರು ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಬೇಕು. ಉತ್ತಮ ವಿದ್ಯಾಭ್ಯಾಸದಲ್ಲಿ ತೊಡಗಿ ಪ್ರತಿಭಾವಂತರಾಗಿ ಉತ್ತಮ ಸ್ಥಾನಮಾನ ಪಡೆದುಕೊಳ್ಳಲು ಮುಂದಾಗಬೇಕು. ಉತ್ತಮ ಶಿಕ್ಷಣದಿಂದ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದರು
ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಗಳಾಗಿ ಬೆಳೆಯಬೇಕು ಮತ್ತು ವಿದ್ಯಾರ್ಥಿಗಳು ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಗುರಿ ತಲುಪಲು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಶಿಕ್ಷಣ ಸಂಸ್ಥೆಗಳು ಉತ್ತಮ ಕಾರ್ಯನಿರ್ವಹಿಸಬೇಕು. ಆಗ ವಿದ್ಯಾರ್ಥಿಗಳ ಜೀವನ ಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಜಯನಗರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ವೀವಿ ಸಂಘದ ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ, ಜಂಟಿ ಕಾರ್ಯದರ್ಶಿ ಜೆ. ನೇಪಾಕ್ಷಪ್ಪ, ಸದಸ್ಯರಾದ ಗುಡೇಕೋಟೆ ನಾಗರಾಜ, ಎಂ. ವಿರೂಪಾಕ್ಷಯ್ಯ, ಜವಳಿ ವೀರೇಶ, ಎಂ. ವಿಜಯಕುಮಾರ್, ಕಾಮರ್ಸ್ ವಿಭಾಗದ ಮುಖ್ಯಸ್ಥ ಎಂ.ಜೆ. ಬಸವರಾಜ ಸಭೆಯಲ್ಲಿ ಭಾಗವಹಿಸಿದ್ದರು.
ಕಾಲೇಜ್ ಪ್ರಾಚಾರ್ಯ ಎಸ್.ಎಸ್. ಪೊಲೀಸ್ ಪಾಟೀಲ್ ಸ್ವಾಗತಿಸಿದರು. ಡಾ.ಕೆ.ಎಂ. ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು. ಅಂಬಿಕಾ ವಂದಿಸಿದರು. ಅಂಕಿತಾ, ಲಕ್ಷ್ಮೀ ಶೆಟ್ಟಿ ನಿರೂಪಿಸಿದರು. ಸಭೆಯ ನಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಿದವು.