ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಜೆಪಿ, ಬಿಎಸ್ಸಾರ್‌ಗೆ ಆಡಳಿತ ಟೀಕಿಸುವ ನೈತಿಕತೆ ಇಲ್ಲ

Lingaraj Badiger
Updated On : 11 Mar 2014, 12:02 pm

ಕನ್ನಡಪ್ರಭ ವಾರ್ತೆ, ಕಂಪ್ಲಿ, ಮಾ. 10
ಬಿಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್‌ನವರಿಗೆ ಕಾಂಗ್ರೆಸ್ ಆಡಳಿತ ವೈಖರಿಯನ್ನು ಟೀಕಿಸುವ ಮತ್ತು ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಪಟ್ಟಣದಲ್ಲಿ ಕಂಪ್ಲಿ ಮತ್ತು ಕುರುಗೋಡು ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ ಭಾರತ ನಿರ್ಮಾಣ ಯಾತ್ರಾ ಹಾಗೂ ಜನಾಂದೋಲನಾ ಪಾದಯಾತ್ರೆ ಬಳಿಕ ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಆವರಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಹೆಲಿಕ್ಯಾಪರ್‌ನಲ್ಲಿ ಓಡಾಡುವ ಲೂಟಿಕೋರರಿಗೆ ಮತದಾರರು ಮತ ನೀಡಬಾರದು. ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ದೌರ್ಜನ್ಯವನ್ನು ಮೆಟ್ಟಿ ನಿಲ್ಲಿ, ನಿಮ್ಮೊಂದಿಗೆ ನಾವಿದ್ದೇವೆ. ಯಾರಿಗೂ ಹೆದರದೆ ಕಾಂಗ್ರೆಸ್‌ಗೆ ಮತ ಹಾಕಿಸಿ, ಎನ್.ವೈ. ಹನುಮಂತಪ್ಪ ಅವರನ್ನು ಗೆಲ್ಲಿಸಿ, ತೊಡೆ ತಟ್ಟಿದ ಶಾಸಕ ಟಿ.ಎಚ್. ಸುರೇಶ್‌ಬಾಬು ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಜೈಲು ಪಾಲಾಗಿದ್ದಾರೆ. ರೆಡ್ಡಿಗಳು, ಶ್ರೀರಾಮುಲು, ಸುರೇಶ್‌ಬಾಬು ಅಕ್ರಮ ಗಣಿಗಾರಿಕೆಯ ಹಣದ ಮದದಲ್ಲಿ ಚುನಾವಣೆಗೆ ಧುಮುಕುತ್ತಿದ್ದು, ಕಾರ್ಯಕರ್ತರು ಸರಿಯಾದ ಪಾಠ ಕಲಿಸಬೇಕು. ಮನೆಯಲ್ಲಿ ಮೂವರು ಮಂತ್ರಿಗಳಿದ್ದಾಗ ಬಿ. ಶ್ರೀರಾಮುಲು ಐಎಸ್‌ಆರ್ ಫ್ಯಾಕ್ಟರಿ ಅಭಿವೃದ್ದಿ ಹಾಗೂ ತುಂಗಭದ್ರಾ ಜಲಾಶಯ ಹೂಳೆತ್ತುವ ಕಾರ್ಯ ಮರೆತಿದ್ದೇಕೆ? ಇವರ ಹೋರಾಟ ಕೇವಲ ಕಣ್ಣೊರೆಸುವ ಕುತಂತ್ರವಾಗಿದ್ದು, ಜನತೆ ಬಲಿಯಾಗಬಾರದು ಎಂದು ತಿಳಿಸಿದರು.
ಜನರ ಗಮನಕ್ಕೆ ತನ್ನಿ: ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಮಾತನಾಡಿ, ಬಿಜೆಪಿ ದುರಾಡಳಿತದಿಂದಾಗಿ ರಾಜ್ಯದ ಬೊಕ್ಕಸ ತಳ ಹಿಡಿಯುವಂತಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಅನುಭವದಿಂದ ಆರ್ಥಿಕ ಚೈತನ್ಯ ಕಾಣುವಂತಾಗಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ನೆಲಕಚ್ಚಿದೆ. ಕಾಂಗ್ರೆಸ್ ಮಾತ್ರ ಸುಭದ್ರ ಆಡಳಿತ ನೀಡಲು ಸಾಧ್ಯ. ಭ್ರಷ್ಟಾಚಾರ-ದೌರ್ಜನ್ಯ ರಹಿತ, ದ್ವೇಷರಹಿತ ಆಡಳಿತ ನೀಡಿದ ಹೆಮ್ಮೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ. ಪಕ್ಷದ ಕಾರ್ಯಕರ್ತರು ಸರ್ಕಾರದ ಸಾಧನೆಗಳನ್ನು ಜನರ ಗಮನಕ್ಕೆ ತಂದು ಕಾಂಗ್ರೆಸ್‌ಗೆ ಮತ ಹಾಕಿಸಬೇಕು ಎಂದು ಹೇಳಿದರು.
ಮತ ನೀಡಿ: ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಮಾತನಾಡಿ, ಕಳೆದ ಬಾರಿ ಅಧಿಕಾರ, ಹಣ ಹಾಗೂ ದೌರ್ಜನ್ಯಗಳಿಂದ ತಾವು ಸೋತಿದ್ದು, ಈ ಬಾರಿ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಗೆಲ್ಲಿಸಿ ತಕ್ಕಪಾಠ ಕಲಿಸಬೇಕು ಎಂದು ಮನವಿ ಮಾಡುವ ಮೂಲಕ ಜನರಲ್ಲಿ ಮತ ಕೋರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯಲು, ಶಾಸಕ ಅನಿಲ್ ಲಾಡ್, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡ ಕಲ್ಲುಕಂಭ ಪಂಪಾಪತಿ, ಗಿರಿಮಲ್ಲಪ್ಪ, ಕಮಲಾ ಮರಿಸ್ವಾಮಿ, ಗುಜ್ಜಲ ನಾಗರಾಜ್, ದೀಪಕ್‌ಕುಮಾರ್ ಸಿಂಗ್,  ಗುಜ್ಜಲ ಗಾದಿಲಿಂಗಪ್ಪ, ಕುರಗೋಡು ಕೆ. ಬಸಪ್ಪ, ವಕೀಲ ಕರ್ಚೇಡ್ ಕೃಷ್ಣ, ನಾಗೇಶ್ವರರಾವ್, ಅಖಿಲೇಶ್, ಎಂ. ಸುಧೀರ್, ಮುರಾರಿ ಲಕ್ಷ್ಮೀ, ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್, ಆಶಾಲತಾ, ಪುರಸಭೆ ಸದಸ್ಯರು ಹಾಗೂ ಮುಖಂಡರು ಮಾತನಾಡಿದರು. ಕಲ್ಲುಕಂಬ ಪಂಪಾಪತಿ ಸ್ವಾಗತಿಸಿದರು. ಸಿ.ಆರ್. ಹನುಮಂತ ಮತ್ತು ಸೈಯ್ಯದ್ ಉಸ್ಮಾನ್ ರೂಪಿಸಿದರು. ಎನ್. ಹಬೀಬ್ ರೆಹಮಾನ್ ವಂದಿಸಿದರು.

ಮಹಿಳಾ ಮುಖಂಡರಿಗೆ ಆದ್ಯತೆ ಇಲ್ಲ: ಕಮಲಾ
ಬಳ್ಳಾರಿ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಮುನ್ಸಿಪಲ್ ಸೆಂಟನರಿ ಹಾಲ್‌ನಲ್ಲಿ ಭಾನುವಾರ ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಬ್ಲಾಕ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಲು ಮಹಿಳೆಯರಿಗೆ ಆದ್ಯತೆ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಮುಖಂಡರಾದ ಕಮಲಾ ಮರಿಸ್ವಾಮಿ ವೇದಿಕೆಯಿಂದ ಕೆಳಗಿಳಿದು ಹೋದ ಘಟನೆ ನಡೆಯಿತು. ವೇದಿಕೆಯಲ್ಲಿ ಪಕ್ಷದ 3-4 ಮಹಿಳಾ ಮುಖಂಡರಿದ್ದರೂ, ಶಾಸಕರು, ಮಾಜಿ ಸಚಿವರು, ಕೆಲ ಮುಖಂಡರು ಮಾತನಾಡಿದರು. ಆದರೆ ಕಾಂಗ್ರೆಸ್ ಮಹಿಳಾ ಮುಖಂಡರಾದ ಕಮಲಾ ಮರಿಸ್ವಾಮಿ ಅವರಿಗೆ ಮಾತನಾಡಲು ಅವಕಾಶ ನೀಡದಿರುವುದರಿಂದ ಕಮಲಾ ಅವರು ಬೇಸತ್ತು ವೇದಿಕೆ ಇಳಿದು ಹೋದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ಜಿಲ್ಲಾಧ್ಯಕ್ಷ ಆಂಜನೇಯಲು ಅವರು ಕಮಲಾ ಮರಿಸ್ವಾಮಿ ಅವರ ಮನವೊಲಿಸಿ, ವೇದಿಕೆಗೆ ಕರೆತಂದರು. ನಂತರ ಭಾಷಣ ಮಾಡಲು ಅವರಿಗೆ ಅವಕಾಶ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಕಮಲಾ ಮರಿಸ್ವಾಮಿ ಅವರು ಮಾತನಾಡಿ, ಮಹಿಳೆಯರಿಗೆ ಸ್ಥಾನಮಾನ ನೀಡಬೇಕು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿದ್ದಾರೆ. ಮಹಿಳೆಯರನ್ನು ಏಕೆ ಕಡೆಗಾಣಿಸುತ್ತಿದ್ದೂರಿ ಎಂದು ವೇದಿಕೆ ಮೇಲಿದ್ದ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿ, ಅವಕಾಶ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement