ರೋಗ ಬರುವ ಮುನ್ನ ಜಾಗ್ರತರಾಗಿ
ಕೊಟ್ಟೂರು: ರೋಗ ಬರುವ ಮೊದಲು ಜಾಗೃತೆ ವಹಿಸದೆ ಇರುವ ಕಾರಣಕ್ಕೆ ಹಲವಾರು ರೋಗಗಳನ್ನು ಮನುಷ್ಯ ತನಗರಿವಿಲ್ಲದಂತೆ ಆಹ್ವಾನಿಸಿಕೊಳ್ಳುತ್ತಿದ್ದಾನೆ. ಈ ತೆರನಾದ ಯಾತನೆಯಿಂದ ಗುಣಪಡುವಂತಾಗಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್ ಹೇಳಿದರು. ಪಟ್ಟಣದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ದಾರುಕಾಚಾರ್ಯ ಶಿಕ್ಷಣ ಸಂಸ್ಥೆ ಹಾಗೂ ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ಆರೋಗ್ಯ ಮೇಳದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶಾರದಾ ಪ್ರಸಾದ್ ಉದ್ಘಾಟನೆ ಮಾಡಿ ಮಾತನಾಡಿ, ರೈತರು, ಬಡವರು, ಕೂಲಿ ಕಾರ್ಮಿಕರಿಗೆ ಈ ಬಗೆಯ ಶಿಬಿರಗಳು ಮತ್ತು ತಪಾಸಣೆ ಹೆಚ್ಚು ಅನುಕೂಲಕರವಾಗುತ್ತವೆ. ದೊಡ್ಡ ಮಟ್ಟದ ವೈದ್ಯರನ್ನು ಪಟ್ಟಣಕ್ಕೆ ಕರೆಯಿಸಿ ಕೊಟ್ಟೂರಿನಂತಹ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ತಪಾಸಣೆಗೆ ಅನುಕೂಲ ಮಾಡಿಕೊಟ್ಟಿರುವ ಜಗದ್ಗುರು ದಾರುಕಾಚಾರ್ಯ ಶಿಕ್ಷಣ ಸಂಸ್ಥೆ ಕೆಲಸ ಮೆಚ್ಚುವಂತದ್ದು ಎಂದರು. ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆ ಹಿರಿಯ ವೈದ್ಯ ಡಾ. ಸುಬ್ಬಾರಾವ್ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ. ಆರೋಗ್ಯದ ಬಗ್ಗೆ ಯಾವುದೆ ಹಂತದಲ್ಲಿ ನಿರ್ಲಕ್ಷ್ಯ ಸಲ್ಲ. ಆರೋಗ್ಯ ನಿರ್ಲಕ್ಷಿಸಿದಷ್ಟು ಎಲ್ಲ ಬಗೆಯ ಆಲಸ್ಯ ಮನೆ ಮಾಡುತ್ತವೆ. ಹೀಗಾಗಿ ಆರೋಗ್ಯವಂತರಾಗಿ ಸದಾ ಜೀವಿಸುವತ್ತ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು. ಚಾನುಕೋಟಿ ಮಠಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೂಡ್ಲಿಗಿ ಹಿರೇಮಠಾಧ್ಯಕ್ಷ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ಎಸ್. ಗುರುಶಾಂತಪ್ಪ, ಬಿ.ಎಸ್. ವೀರೇಶ್, ಪೂಜಾರ್ ನಾಗಪ್ಪ, ಗುಳಿಗೆ ವೀರೇಂದ್ರಕುಮಾರ್, ಬೂದಿ ಶಿವಕುಮಾರ್, ರಾಜೇಶ್ ಕಾರ್ವಾ, ಸಿ. ಬಸವರಾಜ್, ದಾವಣಗೆರೆ ವೈದ್ಯರಾದ ಡಾ. ಪೂರ್ಣಿಮಾ, ಡಾ. ವೆಂಕಟೇಶ್, ಡಾ. ಸತ್ಯನಾರಾಯಣ, ಡಾ. ರಮೇಶ್, ಡಾ. ಪೂಜಾ, ಡಾ. ರವಿಕುಮಾರ್, ಡಾ. ಪ್ರಕಾಶ್, ಮತ್ತಿಹಳ್ಳಿ, ಡಾ. ಮನೋಜ್ ಪೂಜಾರ್, ಡಾ.ಎಸ್. ರಾಕೇಶ್, ಡಾ. ಎಸ್. ಪವಿತ್ರಾ ಇದ್ದರು. ಮಠದ ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಸಂತೋಷ್ ಎನ್.ಎಂ. ವಂದಿಸಿದರು.