ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಎಗ್ಗಿಲ್ಲದೆ ತಲೆ ಎತ್ತುತ್ತಿವೆ ಅನಧಿಕೃತ ಬಡಾವಣೆ

Rashmi Kasaragodu
Updated On : 12 Mar 2014, 2:18 am

ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 11
ನಗರ ಪ್ರದೇಶದಲ್ಲಿ ಅನಧಿಕೃತ ಬಡಾವಣೆ, ಕಟ್ಟಡಗಳು ತಲೆ ಎತ್ತುತ್ತಿದ್ದವು. ಇದೀಗ ಈ ಅನಧಿಕೃತ ಕಟ್ಟಡಗಳು ಗ್ರಾಮೀಣ ಪ್ರದೇಶದಲ್ಲಿ, ಅದರಲ್ಲೂ ನಗರದ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅನಧಿಕೃತ ಬಡಾವಣೆ, ಕಟ್ಟಡಗಳು ತಲೆ ಎತ್ತುತ್ತಿದ್ದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸದಿರುವ ಹಿನ್ನೆಲೆಯಲ್ಲಿ ಎಗ್ಗಿಲ್ಲದೆ ಇಂತಹ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಸಾರ್ವಜನಿಕ ರಸ್ತೆ ಅತಿಕ್ರಮಣ
ಇಲ್ಲಿ ಕೇವಲ ಅನಧಿಕೃತ ಬಡಾವಣೆಗಳು ತಲೆ ಎತ್ತುವುದು ಮಾತ್ರವಲ್ಲದೆ ಸಾರ್ವಜನಿಕ ರಸ್ತೆ ಸ.ನಂ. 261 ಅತಿಕ್ರಮಣ ಮಾಡಿಕೊಂಡು ಅನಧಿಕೃತ ಬಡಾವಣೆ ನಿರ್ಮಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ಅತಿಕ್ರಮಿಸಿದ ರಸ್ತೆ ತೆರವಿಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಆದರೆ ಕ್ರಮ ಮಾತ್ರ ಇಲ್ಲದಾಗಿದೆ. ಇಂತಹ ಸಮಸ್ಯೆ ಬಗ್ಗೆ ಯಾರ ಹತ್ತಿರ ಹೋಗಬೇಕೆಂಬ ನೋವನ್ನು ಅಲ್ಲಿನ ಜನತೆ ಹೇಳಿಕೊಳ್ಳುತ್ತಾರೆ.
ಅಧಿಕಾರಿಗಳ ಆದೇಶಕ್ಕೆ ಕಿಮ್ಮತ್ತಿಲ್ಲ
ಸಂಡೂರು ತಾಲೂಕು ವಡ್ಡು ಗ್ರಾಮಕ್ಕೆ ಸೇರಿದ ಸರ್ವೆ ನಂ. 262ರ 6.16 ಎಕರೆ ಜಮೀನಿನಲ್ಲಿ ಜಮೀನಿನ ಮಾಲೀಕರು ಕೃಷಿಯೇತರ ಬಳಕೆಗೆ ಭೂ ಪರಿವರ್ತನೆ ಮಾಡಿಸದೆ, ವಾಡಾದಿಂದ ವಿನ್ಯಾಸ ಅನುಮೋದನೆ ಪಡೆಯದೆ ಅಕ್ರಮ ಬಡಾವಣೆ ಹಾಗೂ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದ್ದಾರೆ.
ಈ ಕುರಿತು ಸಂಡೂರು ತಹಸೀಲ್ದಾರ್ ಜ. 5, 2012ರಂದು ಸದ್ರಿ ಪಟ್ಟಾದಾರರ ವಿರುದ್ಧ ಕರ್ನಾಟಕ ಭೂ ಕಾಯ್ದೆ ಕಲಂ 95 ಮತ್ತು 96ರ ಪ್ರಕಾರ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದರು.
ಈ ಬಗ್ಗೆ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದವರು ಅನಧಿಕೃತ ಬಡಾವಣೆ ನಿರ್ಮಿಸಿದವರಿಗೆ ನೋಟಿಸ್ ಜಾರಿ ಮಾಡಿ, ಬಡಾವಣೆ ಮತ್ತು ಕಟ್ಟಡ ತೆರವುಗೊಳಿಸಬೇಕೆಂದು ಸೂಚಿಸಿ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಈವರೆಗೆ ತೆರವು ಕಾರ್ಯಾಚರಣೆ ನಡೆಯದೆ ಅಧಿಕಾರಿಗಳ ಮಾತಿಗೆ ಕಿಮ್ಮತ್ತಿಲ್ಲದಂತಾಗಿದೆ.
ವಡ್ಡು ಗ್ರಾಮದ ಉಮೇಶ್ ಮಾತನಾಡಿ, ಸಾರ್ವಜನಿಕರ ದಾರಿಯನ್ನು ಬಡಾವಣೆಗೆ ಅತಿಕ್ರಮಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಯಾವುದೆ ಕ್ರಮ ಕೈಗೊಂಡಿಲ್ಲ. ರಾತ್ರೋ ರಾತ್ರಿ ಬೋರ್‌ವೆಲ್ ಹಾಕುತ್ತಿದ್ದಾರೆ ಎಂದು ಆರೋಪಿಸುತ್ತಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement