ಪೂರ್ವಜರ ಪಂಚಸೂತ್ರ ಅನುಸರಿಸಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 11
ರೈತರು ಸಕಾರಾತ್ಮಕ ಚಿಂತನೆಗಳಿಗಿಂತ ನಕಾರಾತ್ಮಕ ಮಾತುಗಳಿಗೆ ಹೆಚ್ಚು ಗಮನ ಹರಿಸುವುದರಿಂದ ಹಾಗೂ ಪೂರ್ವಜರ ಪಂಚಸೂತ್ರಗಳನ್ನು ಇಂದಿನ ರೈತರು ಅನುಸರಿಸದ ಹಿನ್ನೆಲೆಯಲ್ಲಿ ಕೃಷಿಯಲ್ಲಿ ಅಭಿವೃದ್ಧಿ ಮತ್ತು ಲಾಭ ಕಾಣುವುದು ಕಷ್ಟವಾಗುತ್ತಿದೆ ಎಂದು ರಾಯಚೂರು ಕೃಷಿ ವಿವಿಯ ಕುಲಪತಿ ಬಿ.ವಿ. ಪಾಟೀಲ್ ತಿಳಿಸಿದ್ದಾರೆ.
ರಾಯಚೂರು ಕೃಷಿ ವಿವಿಯ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ಕಚೇರಿಯಲ್ಲಿ ಏರ್ಪಡಿಸಿದ್ದ ಒಣ ಭೂಮಿ ಬೇಸಾಯ ಎಂಬ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಒಣ ಮತ್ತು ನೀರಾವರಿ ಬೇಸಾಯದಲ್ಲಿ ಲಾಭ ಗಳಿಸಬೇಕಾದರೆ, ಪೂರ್ವಜರು ಹಾಕಿಕೊಟ್ಟ ಭೂಮಿಯ ಬಗ್ಗೆ ಕಾಳಜಿ, ಕೃಷಿಗೆ ಬೇಕಾಗುವ ಬೀಜ ಮತ್ತು ಬಿತ್ತನೆ ಸಾಮಗ್ರಿಗಳ ಬಗ್ಗೆ ಪೂರ್ವ ತಯಾರಿ, ಪ್ರತಿವರ್ಷ ಬೆಳೆಯ ಪರಿವರ್ತನೆ, ಮಳೆ ನೀರು ಹರಿದು ಹೋಗದಂತೆ, ಹಸಿ ಮತ್ತು ಮಣ್ಣಿನ ಸವಕಳಿ ಕಾಯ್ದುಕೊಳ್ಳುವುದು, ರೈತರು ಬೆಳೆದ ಬೆಲೆಯ ಕುರಿತಾದ ಚಿಂತನೆ ಎಂಬ ಪಂಚಸೂತ್ರಗಳನ್ನು ಪ್ರತಿಯೊಬ್ಬ ರೈತರು ಅನುಸರಿಸಿದಲ್ಲಿ ಕೃಷಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ನಿರೀಕ್ಷಿತ ಸಾಧನೆ: ಸದ್ಯ ಒಣ ಬೇಸಾಯದಲ್ಲಿ ತಿಂಗಳಿಗೆ ರು. 4-5 ಸಾವಿರ ಹಾಗೂ ನೀರಾವರಿಯಲ್ಲಿ ರು. 10-12 ಸಾವಿರ ಲಾಭ ಪಡೆಯಲಾಗುತ್ತಿದೆ. ಇನ್ನು ಮುಂದಿನ 5 ವರ್ಷಗಳಲ್ಲಿ ಹೊಲಗಳಲ್ಲಿ ಹಣ್ಣು, ತರಕಾರಿ ಬೆಳೆಯಲಾಗುತ್ತಿದ್ದು, ಅದರ ಲಾಭ ಬಂದಲ್ಲಿ ನಮ್ಮ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡಲಾಗುತ್ತದೆ ಎಂದರು.
ಇಂದಿನ ದಿನಗಳಲ್ಲಿ ರೈತರು ಒಣಭೂಮಿಯಲ್ಲಿ 50-52 ದಿನ ಹಾಗೂ ನೀರಾವರಿಯಲ್ಲಿ 150-200 ದಿನಗಳು ಕೆಲಸ ಮಾಡುತ್ತಿದ್ದಾರೆ. ಆದರೆ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ವರ್ಷವಿಡೀ ಕೆಲಸ ಮಾಡಬಹುದಾಗಿದೆ. ಇಂತಹ ವ್ಯವಸ್ಥೆಯಿಂದಾಗಿ ಉದ್ಯೋಗ ಹರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ತಡೆಗಟ್ಟಬಹುದಾಗಿದ್ದು, ಇದರಿಂದಾಗಿ ಕೃಷಿಯಲ್ಲಿ ವಿದ್ಯಾವಂತರಿಗೆ ಆಸಕ್ತಿ ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ ಕಡಿಮೆ: ಐಸಿಎಐ ಮಾಜಿ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಮಾತನಾಡಿ, ನ್ಯಾಷನಲ್ ನ್ಯಾಚುರಲ್ ಸರ್ವೆ ಪ್ರಕಾರ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ದೇಶಕ್ಕಿಂತ ರಾಜ್ಯದಲ್ಲಿ ಕಡಿಮೆ ಇದೆ. ದೇಶದಲ್ಲಿ ಶೇ. 20.9ರಷ್ಟಿದ್ದರೆ, ರಾಜ್ಯದಲ್ಲಿ ಇದಕ್ಕಿಂತ ಒಂದು ಕಡಿಮೆ ಇದೆ ಎಂದರು.
ಅರಣ್ಯಾಧಿಕಾರಿ ಮಣಿಕಂಠನ್ ಉಪನ್ಯಾಸ ನೀಡಿದರು. ವಿವಿ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ವಿಶ್ವನಾಥ್, ನಬಾರ್ಡ್ ಅಧಿಕಾರಿ ಭಾರದ್ವಾಜ್ ವಿಷಯ ಮಂಡಿಸಿದರು. ಜಂಟಿ ಕೃಷಿ ಅಧಿಕಾರಿ ಬಿ. ರಾಮಪ್ಪ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ಜಿ. ರವಿಶಂಕರ್, ಸಂಸ್ಥೆಯ ಸಿಎ ಕೆ. ರಾಜಶೇಖರ್, ಎಚ್.ಎಸ್. ಪ್ರಸನ್ನಕುಮಾರ್, ನೂರಾರು ರೈತರು, ಸಿಎ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.