ಟೆಂಡರ್ ಪಡೆಯಲು ಬಾರದ ಗುತ್ತಿಗೆದಾರರು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 12
ಅಗತ್ಯವಿರುವ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಬಂದಿಲ್ಲ, ರಸ್ತೆ ಅಭಿವೃದ್ಧಿಯಾಗಿಲ್ಲ, ಅನುದಾನ ಕೊರತೆ ಎಂಬ ಕೊರಗು, ಸಮಸ್ಯೆಗಳು ಸಾಮಾನ್ಯ.
ಆದರೆ ಸಿರುಗುಪ್ಪ ತಾಲೂಕಿನ ಅನೇಕ ಕಾಮಗಾರಿಗಳಿಗೆ ಅನುದಾನವಿದೆ, ಟೆಂಡರ್ ಕರೆಯಲಾಗಿದೆ, ಆದರೂ ಕೆಲ ಕಾಮಗಾರಿಗಳನ್ನು ಮಾಡಲು ಗುತ್ತಿಗೆದಾರರು ಮುಂದಾಗದಿರುವುದು ಆಶ್ಚರ್ಯ ಮೂಡಿಸಿದೆ.
ಟೆಂಡರ್ ಕರೆಯುವುದನ್ನೇ ಕಾಯುತ್ತ ಕುಳಿತು, ಕಾಮಗಾರಿ ಮಾಡುವ ಗುತ್ತಿಗೆದಾರರು ಅನೇಕರಿದ್ದಾರೆ. ಆದರೆ ಸಿರುಗುಪ್ಪ ತಾಲೂಕಿನಲ್ಲಿ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಯಾವುದೇ ಕಾಮಗಾರಿಗಳನ್ನು ಮಾಡಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಇದು ಸಹಜವಾಗಿ ಹಲವು ಅನುಮಾನ, ಆಶ್ಚರ್ಯ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ಜಿಲ್ಲಾ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆ ಸೇರಿದಂತೆ ಇತರ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಅಂತೆಯೆ ಆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಗಳು 2 ಬಾರಿ ಟೆಂಡರ್ ಕರೆದರೂ ಕಾಮಗಾರಿ ತೆಗೆದುಕೊಳ್ಳಲು ಯಾವ ಗುತ್ತಿಗೆದಾರರು ಮುಂದೆ ಬಂದಿಲ್ಲ. ಇದು ಇಲಾಖೆಗಳ ತಲೆನೋವಿಗೆ ಕಾರಣವಾಗಿದೆ. ಅತ್ತ ರಸ್ತೆ ಅಭಿವೃದ್ಧಿಯಾಗದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂಬ ಆರೋಪ ಸಾರ್ವಜನಿಕರದ್ದು. ಇತ್ತ ಸರ್ಕಾರ ಅಥವಾ ಇಲಾಖೆಗಳು ಅನುದಾನ ಬಿಡುಗಡೆ ಮಾಡಿದರೂ ಆ ಕಾಮಗಾರಿಗಳು ನಡೆಯುತ್ತಿಲ್ಲ ಎಂಬುದು ಮಾತ್ರ ಆಶ್ಚರ್ಯದ ಸಂಗತಿ.
ಯಾವ ಯಾವ ಕಾಮಗಾರಿ?: ಕುಡದರಹಾಳ್- ಹಚ್ಚೊಳ್ಳಿ- ಹೊತ್ತಮುರಣಿ ರಸ್ತೆ ಹದೆಗಟ್ಟಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ. ರಸ್ತೆಯಲ್ಲಿ ಸಂಚರಿಸಲು ಅಲ್ಲಿನ ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮಸ್ಯೆಯ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ರು. 5 ಕೋಟಿ ಅನುದಾನದಡಿ 7.3 ಕಿ.ಮೀ.ಗಳಿಂದ 17.4 ಕಿ.ಮೀ. ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದೆ. ಈ ಕಾಮಗಾರಿಗೆ ಎರಡು ಬಾರಿ ಟೆಂಡರ್ ಕರೆಯಲಾಗಿದೆ ಆದರೆ ಒಬ್ಬೇ ಒಬ್ಬ ಗುತ್ತಿಗೆದಾರರೂ ಈ ಟೆಂಡರ್ ಪಡೆಯಲು ಮುಂದಾಗುತ್ತಿಲ್ಲ. ಅದೇ ರೀತಿ ನಾಡಂಗ, ಹೊತ್ತುಮುರಣಿ ರಸ್ತೆಯ ನಿರ್ವಹಣೆಗೆ ರು. 8.90 ಲಕ್ಷಕ್ಕೆ ಟೆಂಡರ್ನ್ನು ಎರಡು ಬಾರಿ ಕರೆದರೂ ಗುತ್ತಿಗೆದಾರ ಟೆಂಡರ್ಗೆ ಅರ್ಜಿ ಹಾಕಲು ಹಿಂದೇಟು ಹಾಕಿದ್ದಾನೆ.
ಕುಡದರಹಾಳ್ನಿಂದ ನಾಡಂಗ ರಸ್ತೆಯ ನಿರ್ವಹಣೆಗೆ ರು. 7.89 ಲಕ್ಷಕ್ಕೆ ಟೆಂಡರ್ ಕರೆದಿದ್ದರೂ ಅಲ್ಲೂ ಟೆಂಡರ್ನ್ನು ಯಾರೂ ಪಡೆದಿಲ್ಲ. ಇನ್ನು ರಾರಾವಿಯಿಂದ ಕೆ. ಬೆಳಗಲ್ ರಸ್ತೆ ಅಭಿವೃದ್ಧಿಗೆ ರು. 1 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದರೂ ಇದಕ್ಕೂ ಗುತ್ತಿಗೆದಾರ ಮನಸ್ಸು ಮಾಡಿಲ್ಲ. ಅಲ್ಲದೆ ಜಿಪಂ ವ್ಯಾಪ್ತಿಯಲ್ಲಿ ಉತ್ತನೂರಿನ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ರು. 35 ಲಕ್ಷ ಟೆಂಡರ್ಗೆ ಯಾವ ಗುತ್ತಿಗೆದಾರನೂ ಕ್ಯಾರೆ ಎಂದಿಲ್ಲ. ಇಂತಹ ಅನೇಕ ಕಾಮಗಾರಿಗಳ ಟೆಂಡರ್ಗಳಿಗೆ ಇದೇ ಪರಿಸ್ಥಿತಿ ಮುಂದುವರಿದಿದೆ.
ಅನುಮಾನಕ್ಕೆ ಕಾರಣ: ಸದ್ಯ ಲೋಕಸಭೆಗೆ ಚುನಾವಣೆ ಇರುವುದರಿಂದ ಟೆಂಡರ್ ಕರೆಯಲು ನೀತಿಸಂಹಿತೆ ಅಡ್ಡಿಯಾಗುತ್ತದೆ. ಆದರೆ ಈ ಹಿಂದೆ ಹಲವು ಬಾರಿ ಕರೆದಿರುವ ಟೆಂಡರ್ಗೆ ಯಾವ ಗುತ್ತಿಗೆದಾರರೂ ಬಿಡ್ ಹಾಕಲು ಮುಂದಾಗುತ್ತಿಲ್ಲವೇಕೆ ಎಂಬುದು ಕುತೂಹಲದ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ. ಕೆಲ ಸಂದರ್ಭದಲ್ಲಿ ಸ್ಥಳೀಯವಾಗಿ ಕೆಲಸ ಮಾಡಲು ಸಾಧ್ಯವಾಗದಿರುವುದು, ನಷ್ಟವಾಗುತ್ತದೆ ಎಂಬ ಭೀತಿ, ಸ್ಥಳೀಯರಿಂದ ಕಿರಿಕಿರಿ ಆಗಬಹುದು ಎಂಬ ಕಾರಣದಿಂದ ಗುತ್ತಿಗೆದಾರರು ಟೆಂಡರ್ ಹಾಕಲು ಮುಂದಾಗುವುದಿಲ್ಲ ಎಂಬ ಮಾತಿದೆ. ಆದರೆ ಸಿರುಗುಪ್ಪದಲ್ಲಿ ಏಕೆ ಎಲ್ಲಾ ಗುತ್ತಿಗೆದಾರರು ಇಂತಹ ಕಾಮಗಾರಿಗೆ ಟೆಂಡರ್ ಹಾಕಲು ಮುಂದೆ ಬಂದಿಲ್ಲ ಎಂಬುದು ಮಾತ್ರ ಸೋಜಿಗದ ಸಂಗತಿ. ಇದು ಅನೇಕ ಅನುಮಾನಗಳಿಗೂ ಕಾರಣವಾಗಿದೆ.
ಎರಡು ಬಾರಿ ಕರೆದರೂ ಇಲ್ಲ: ಗುತ್ತಿಗೆದಾರರು ಯಾವುದೇ ಕಾಮಗಾರಿಗೆ ಟೆಂಡರ್ ಕರೆದ ತಕ್ಷಣ ಟೆಂಡರ್ ಹಾಕುತ್ತಾರೆ. ರಸ್ತೆ ಕಾಮಗಾರಿ, ರಸ್ತೆ ನಿರ್ವಹಣೆ ಕಾಮಗಾರಿ ಟೆಂಡರ್ಗೆ ಕೂಡಲೆ ಗುತ್ತಿಗೆದಾರರು ಟೆಂಡರ್ ಹಾಕುತ್ತಿದ್ದರು. ಆದರೆ ಸಿರುಗುಪ್ಪದಲ್ಲಿ ಮಾತ್ರ ಎರಡು ಮೂರು ಬಾರಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದರೂ, ಗುತ್ತಿಗೆದಾರರು ಟೆಂಡರ್ ಹಾಕದಿರಲು ಕಾರಣ ಏನು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಒಂದು ಕಡೆ ರಸ್ತೆ ಸಮಸ್ಯೆಯಿಂದ ಅಲ್ಲಿನ ಜನರು ಬಳಲುತ್ತಿದ್ದಾರೆ. ಅನುದಾನ ಇದ್ದು, ಟೆಂಡರ್ ಕರೆದರೂ ಗುತ್ತಿಗೆದಾರರು ಏಕೆ ಕಾಮಗಾರಿ ಪಡೆಯಲು ಮುಂದಾಗುತ್ತಿಲ್ಲ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಡುತ್ತಿದ್ದಾರೆ.
ಸರ್ಕಾರದ ಯಾವುದೇ ಕಾಮಗಾರಿಯನ್ನು ಪಡೆದರೆ ಪರ್ಸೆಂಟೇಜ್ ನೀಡಬೇಕಾಗುತ್ತಿದೆ ಎಂಬ ಮಾತಿದೆ. ಅಂತಹ ಸಮಸ್ಯೆ ಸಿರುಗುಪ್ಪದಲ್ಲಿ ಕರೆದ ಈ ಕಾಮಗಾರಿಗಳಿಗೆ ಉದ್ಭವಿಸಿದೆಯೆ? ಇದರಿಂದಾಗಿ ಗುತ್ತಿಗೆದಾರರು ಪರ್ಸೆಂಟೇಜ್ಗೆ ಭೀತಿಗೊಂಡು, ಕಾಮಗಾರಿ ಪಡೆಯಲು ಮುಂದಾಗುತ್ತಿಲ್ಲವೇ? ಅಥವಾ ಕಾಮಗಾರಿ ಕೈಗೊಂಡರೆ ನಷ್ಟವಾಗುತ್ತದೆ ಎಂಬ ಭೀತಿಯೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗಳು ಮಾತ್ರ ಸಿರುಗುಪ್ಪ ತಾಲೂಕು ಜನತೆಯಲ್ಲಿ ಕಾಡುತ್ತಿವೆ.
-ಶಶಿಧರ ಮೇಟಿ