ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದ್ವಿತೀಯ ಪಿಯು ಪರೀಕ್ಷೆ ಆರಂಭ

Lingaraj Badiger
Updated On : 13 Mar 2014, 11:12 am

ಬಳ್ಳಾರಿ: ನಗರದ 8 ಕೇಂದ್ರಗಳು ಸೇರಿದಂತೆ ಜಿಲ್ಲೆಯ 20 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಬುಧವಾರದಿಂದ ಆರಂಭಗೊಂಡಿವೆ. ಮೊದಲ ದಿನ ರಾಜ್ಯಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಿತು.
ಬುಧವಾರ ನಡೆದ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು 19,286 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಇದರಲ್ಲಿ 13,994 ರೆಗ್ಯುಲರ್ ವಿದ್ಯಾರ್ಥಿಗಳು, 3967 ಪುನರಾವರ್ತಿತ ಹಾಗೂ 1325 ಖಾಸಗಿ ಅಭ್ಯರ್ಥಿಗಳಿದ್ದಾರೆ. ಮೊದಲ ದಿನದ ಪರೀಕ್ಷೆಯಲ್ಲಿ ಯಾವುದೆ ಡಿಬಾರ್ ಪ್ರಕರಣಗಳು ನಡೆದಿಲ್ಲ. ಎಲ್ಲ ಕಡೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷ ತನಿಖಾ ದಳಗಳನ್ನು ರಚಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ. ತಿಮ್ಮರಾಯಪ್ಪ ತಿಳಿಸಿದ್ದಾರೆ. ಗುರುವಾರ ಜೀವಶಾಸ್ತ್ರ ಹಾಗೂ ಎಲೆಕ್ಟ್ರಾನಿಕ್ಸ್ ಪರೀಕ್ಷೆಗಳು ನಡೆಯಲಿವೆ.
ಸುಗಮವಾಗಿ ನಡೆದ ಪಿಯುಸಿ ಪರೀಕ್ಷೆ
ಕೊಟ್ಟೂರು: ದ್ವಿತೀಯ ಪಿಯುಸಿ ಪರೀಕ್ಷೆಯು ಬಿಗಿ ಬಂದೋಬಸ್ತ್ ಮತ್ತು ರಕ್ಷಣೆಯೊಂದಿಗೆ ಪಟ್ಟಣದ 2 ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭಗೊಂಡಿದ್ದು, ಇಲ್ಲಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ 950 ವಿದ್ಯಾರ್ಥಿಗಳು ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 450 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬುಧವಾರ ಹಾಜರಾಗಿದ್ದರು.
ರಾಜ್ಯಶಾಸ್ತ್ರ ವಿಷಯದ ಪರೀಕ್ಷೆ ಬುಧವಾರ ಸಾಗಿದ ಸಂದರ್ಭ ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ಉಪತಹಸೀಲ್ದಾರ್ ಮಂಜುನಾಥ, ಕಂದಾಯ ಪರಿವೀಕ್ಷಕ ಸೋಮನಗೌಡ, ಗ್ರಾಮ ಲೆಕ್ಕಿಗ ವಿಜಯಕುಮಾರ್ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಯಾವುದೇ ಬಗೆಯ ಅಕ್ರಮಗಳು ನಡೆದಿಲ್ಲದಿರುವುದರ ಬಗ್ಗೆ ಖಾತರಿ ಪಡಿಸಿಕೊಂಡರು.
ಪರೀಕ್ಷೆಗೆಂದೇ ಸ್ಕ್ವಾಡ್ ಆಗಿ ಗಂಗಾವತಿಯಿಂದ ಶರಣಪ್ಪ, ಹೂವಿನಹಡಗಲಿಯಿಂದ ಬಾಗೇವಾಡಿ ಎಂಬ ಹಿರಿಯ ಉಪನ್ಯಾಸಕರು ಆಗಮಿಸಿದ್ದು, ಎಲ್ಲ ದೃಷ್ಟಿಯಿಂದ ಪರೀಕ್ಷೆ ಸುಗಮವಾಗಿ ಸಾಗಿವೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆ: 22 ಗೈರು
ಹಗರಿಬೊಮ್ಮನಹಳ್ಳಿ: ಬುಧವಾರ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಯ ರಾಜ್ಯಶಾಸ್ತ್ರ ವಿಷಯದಲ್ಲಿ ಪಟ್ಟಣದ ಜಿವಿಪಿಪಿ ಸರ್ಕಾರಿ ಪಪೂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 22 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಈ ವಿಷಯದಲ್ಲಿ ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳಿಂದ 621 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. ಈ ಪೈಕಿ 599 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ತಿಳಿಸಿದ್ದಾರೆ.
ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಎಲ್ಲ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲೂ ವ್ಯಾಪಕ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಶಾಸ್ತ್ರ ಸರಳ ವಿಷಯವಾದರೂ 22 ವಿದ್ಯಾರ್ಥಿಗಳು ಗೈರಾಗಿದ್ದರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement