ಮುದ್ರಣ ಮಾಧ್ಯಮ ವಿನಾಶದ ಅಂಚಿಗೆ: ಕಳವಳ
ಹೂವಿನಹಡಗಲಿ: ದೃಶ್ಯ ಮಾಧ್ಯಮದ ಅಬ್ಬರದಲ್ಲಿ ಮುದ್ರಣ ಮಾಧ್ಯಮ ವಿನಾಶದ ಅಂಚಿಗೆ ಬಂದಿದೆ ಎಂದು ಪತ್ರಕರ್ತ ಬುಡ್ಡಿ ಬಸವರಾಜ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಹಗರಿಬೊಮ್ಮನಹಳ್ಳಿ ಸುಯೋಧನ ಪ್ರಕಾಶನ ಹೊರ ತಂದ ಉ.ಷಾ. ಬಸವಣ್ಣೆಪ್ಪ ಅವರ 'ಗಿರಿಗಾನ' ಎಂಬ ಸಮಗ್ರ ಕವನ ಸಂಕಲನ ಮತ್ತು ಎ. ಚಿದಾನಂದ ಅವರ 'ರೊಟ್ಟಿಹಳ್ಳಿ ಪಂಚಾಯ್ತಿ' ಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿ ಕೆ. ವಿರೂಪಾಕ್ಷಗೌಡ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಕೃತಿಗಳ ಕುರಿತು ಸಾಹಿತ್ಯಾಸ್ತಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಿಂದ ಲೇಖಕರು, ಸಾಹಿತಿಗಳಿಗೆ ತಪ್ಪಿನ ಅರಿವು ಮತ್ತು ಅದರ ಆಳ, ಅಗಲ ಅರಿಯಲು ಸಾಧ್ಯ ಹಾಗೂ ಅವರ ಸಾಹಿತ್ಯಕ್ಕೆ ಮನ್ನಣೆ ಸಿಕ್ಕು ಇನ್ನು ಉತ್ತಮ ಕೃತಿಗಳ ರಚನೆಗೆ ಸಹಕಾರಿಯಾಗಬಲ್ಲದು ಎಂದರು.
ಸುಯೋಧನ ಪ್ರಕಾಶನದ ಎ. ಚಿದಾನಂದ ಪ್ರಾಸ್ತಾವಿಕ ಮಾತನಾಡಿ, ಪುಸ್ತಕಗಳನ್ನು ಮುದ್ರಣ ಮಾಡುವುದರಿಂದ ಕೋಟಿ ಗಟ್ಟಲೆ ಹಣ ಬಂದು ಬೀಳುವುದಿಲ್ಲ. ಆದರೆ ಅದಕ್ಕೂ ಮೀಗಿಲಾಗಿ ಪ್ರಕಾಶರಿಗೆ ಸಿಗುವ ಸಂತೋಷ, ನೆಮ್ಮದಿ, ಶಾಂತಿಯೆ ಬಹಳ ದೊಡ್ಡದು ಎಂದು ಹೇಳಿದರು.
'ಗಿರಿಗಾನ' ಸಮಗ್ರ ಕವನ ಸಂಕಲನದ ಬಗ್ಗೆ ಮಾತನಾಡಿದ ಶಿಕ್ಷಕ ಎಚ್.ಜಿ. ಪಾಟೀಲ್, ಉ.ಷಾ. ಬಸವಣ್ಣೆಪ್ಪನವರಿಗೆ ದೈಹಿಕವಾಗಿ ವಯಸ್ಸಾಗಿದೆ. ಆದರೆ ಅವರ ಬರವಣಿಗೆಗಳಿಗೆ ವಯಸ್ಸಾಗಿಲ್ಲ. ಇಂದಿಗೂ ಕನ್ನಡ ಸಾಹಿತ್ಯ ಚಟವಟಿಕೆಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಇವರು ವಾಸವಾಗಿದ್ದರಿಂದ ಇವರ ಕೃತಿಗಳಿಗೆ ಅಷ್ಟು ಪ್ರಚಾರ ಸಿಕ್ಕಿಲ್ಲ. ಅತ್ಯುತ್ತಮ ಕೃತಿಗಳನ್ನು ಬರೆದರೂ ಪ್ರಚಾರದಿಂದ ದೂರ ಉಳಿದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುತ್ತಿದ್ದಾರೆಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಉ.ಷಾ. ಬಸವಣ್ಣೆಪ್ಪ, ಕಸಾಪ ಅಧ್ಯಕ್ಷ ಸುರೇಶ ಅಂಗಡಿ, ಜಗದೀಶ, ಸೋಗಿ ನಾಗರಾಜ, ಕಲ್ಲೇಶಪ್ಪ ಇಟಿಗಿ ಸೇರಿದಂತೆ ಇತರರಿದ್ದರು. ಡಾ. ಸತೀಶ ಕಾರ್ಯಕ್ರಮ ನಿರೂಪಿಸಿದರು.