ಚುನಾವಣೆ ಅಕ್ರಮಗಳ ಮೇಲೆ ಗುಪ್ತ ಕಣ್ಣು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 13
ಚುನಾವಣೆಯಲ್ಲಿ ಅಕ್ರಮ ಎಸಗುವವರೆ ಎಚ್ಚರ! ಅಪ್ಪಿತಪ್ಪಿ ಗ್ರಾಮದಲ್ಲಿ ಪೊಲೀಸರ ಸುಳಿವಿಲ್ಲ ಎಂದು ಮತದಾರರಿಗೆ ದುಡ್ಡು ಹಂಚಿದರೆ ಅಥವಾ ಆಮಿಷವೊಡ್ಡಿದರೆ ನೇರವಾಗಿ ಎಸ್ಪಿಗೆ ಮಾಹಿತಿ ಹೋಗುತ್ತದೆ. ಏಕೆಂದರೆ ನಿಮ್ಮೊಳಗೊಬ್ಬ ಮಾಹಿತಿದಾರ ಇದ್ದಾನೆ.
ಹೌದು, ಪೊಲೀಸ್ ಇಲಾಖೆ ಬಳ್ಳಾರಿ ಜಿಲ್ಲೆಯ ಪ್ರತಿ ಗ್ರಾಮದಲ್ಲಿ ನಾಲ್ವರು ಗುಪ್ತ ಮಾಹಿತಿದಾರರನ್ನು ನೇಮಕ ಮಾಡಿ, ಅವರಿಂದ ಮಾಹಿತಿ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಚುನಾವಣೆ ಅಕ್ರಮ ತಡೆಯಲು ಇಲಾಖೆ ವಿಶೇಷ ಗಮನ ಹರಿಸಿದ್ದು, ಅದಕ್ಕಾಗಿಯೇ ಜಿಲ್ಲೆಯಲ್ಲಿ 2 ಸಾವಿರ ಗುಪ್ತ ಮಾಹಿತಿದಾರರನ್ನು ನೇಮಕ ಮಾಡಿದೆ.
ಪೊಲೀಸರಿಲ್ಲ ಎಂದುಕೊಂಡು ಯಾವುದೇ ಪಕ್ಷದ ಕಾರ್ಯಕರ್ತರು ಅಕ್ರಮ ಚಟುವಟಿಕೆಗೆ ಇಳಿದರೆ ಅದು ದಡ್ಡತನವಾದೀತು. ಅಷ್ಟೇ ಅಲ್ಲ ಪೊಲೀಸರ ಕೆಂಗಣ್ಣಿಗೆ ಗುರಿಯಾಗುವುದು ತಪ್ಪುವುದಿಲ್ಲ. ಯಾಕೆಂದರೆ ಗುಪ್ತ ಮಾಹಿತಿದಾರ ಗ್ರಾಮದಲ್ಲಿ ನಡೆಯುವ ಎಲ್ಲ ಬೆಳವಣಿಗೆಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡುತ್ತಿರುತ್ತಾನೆ. ಮದ್ಯ ಮಾರಾಟ, ಹಣ ಹಂಚುವಿಕೆ, ಮತದಾರರಿಗೆ ಯಾವುದೇ ರೀತಿಯ ಆಮಿಷ ಒಡ್ಡುವುದು, ಗಲಾಟೆ ಮತ್ತಿತರ ವ್ಯವಹಾರಗಳ ಮೇಲೆ ನಿಗಾ ಇಟ್ಟಿರುತ್ತಾನೆ.
ನೇರ ಸಂಪರ್ಕ: ಆ ಮಾಹಿತಿದಾರನ ಹೆಸರು ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿ, ಸಿಬ್ಬಂದಿಗೂ ಗೊತ್ತಿರುವುದಿಲ್ಲ. ಹೀಗಾಗಿ ಮಾಹಿತಿದಾರ ಯಾರು ಎಂದು ಗ್ರಾಮದವರಿಗೂ ಗೊತ್ತಾಗುವ ಸಾಧ್ಯತೆ ಇಲ್ಲ. ಆತ ನೇರವಾಗಿ ಎಸ್ಪಿಯೊಂದಿಗೆ ಸಂಪರ್ಕ ಹೊಂದಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು.
ಅಕ್ರಮದ ಮೇಲೆ ಕಣ್ಣು: ಲೋಕಸಭೆ ಚುನಾವಣೆಯಲ್ಲಿ ನಡೆಯುವ ಅಕ್ರಮ ತಡೆಯುವ ಉದ್ದೇಶದಿಂದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ಸಿಂಗ್ ರಾಥೋಡ್ ಮಾಹಿತಿದಾರನನ್ನು ನೇಮಕ ಮಾಡಿದ್ದಾರೆ. ಕೇವಲ ಪೊಲೀಸ್ ಠಾಣೆ ಮಾತ್ರ ಅವಲಂಬಿಸದೆ, ಸಾರ್ವಜನಿಕರಿಂದಲೇ ಚುನಾವಣೆ ಅಕ್ರಮದ ಕುರಿತು ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಪೊಲೀಸರ ಕಣ್ತಪ್ಪಿಸಿ ನಡೆಯುವ ಅಕ್ರಮಗಳ ಪತ್ತೆಗೆ ಪ್ರಾಮಾಣಿಕ, ವಿಭಿನ್ನ ಪ್ರಯತ್ನ ನಡೆಸಿದ್ದಾರೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆ: ಜನಸ್ನೇಹಿ ಪೊಲೀಸ್ ಎಂಬ ಅಂಗೈ ಅಗಲದ ಕರಪತ್ರ ಮುದ್ರಿಸಿ ಅದರಲ್ಲಿ ತಮ್ಮ ಮೊಬೈಲ್ ನಂಬರ್, ದೂರವಾಣಿ ಸಂಖ್ಯೆ, ಜಿಲ್ಲಾಧಿಕಾರಿಗಳ ದೂರವಾಣಿ ಸಂಖ್ಯೆ ನಮೂದಿಸಿ ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಹಂಚಲು ರಾಥೋಡ್ ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾರಾದರೂ ಮದ್ಯ, ಹಣ ವಿತರಣೆ, ಮತ್ತಿತರ ರೂಪದಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರುವ ಸಂಗತಿಗಳು ಕಂಡುಬಂದಲ್ಲಿ ಎಸ್ಪಿ ಡಾ. ಚೇತನ್ಸಿಂಗ್ ರಾಥೋಡ್, ಮೊಬೈಲ್ ಸಂಖ್ಯೆ- 9480803001, ದೂ.ಸಂ.- 08392-258400, 258300, ಜಿಲ್ಲಾಧಿಕಾರಿ ಕಚೇರಿ ಬಳ್ಳಾರಿ- 08392-277209, ಕಂಟ್ರೋಲ್ ರೂಂ-08392-258100, 258101, 258102 ಸಂಪರ್ಕಿಸಿ ಮಾಹಿತಿ ನೀಡಬಹುದು. ನೀವು ಇಚ್ಛಿಸಿದರೆ ನಿಮ್ಮ ಹೆಸರು ಗುಪ್ತವಾಗಿಡಲಾಗುತ್ತದೆ ಎಂಬ ಮಾಹಿತಿಯನ್ನು ಕರಪತ್ರದಲ್ಲಿ ಮುದ್ರಿಸಿ ಹಂಚಲಾಗುತ್ತಿದೆ.
-ಶಶಿಧರ ಮೇಟಿ