ಮತದಾನ ಜಾಗೃತಿ: ಸಂವಾದ
ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅರ್ಹ ಮತದಾರರು ಮಾ. 16ರೊಳಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿ ಮುಕ್ತ ಮತದಾನ ಮಾಡುವ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಸಲಾವುದ್ದೀನ್ ಬಿಎಡ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಸ್ಥಳೀಯ ಕೌಲ್‌ಬಜಾರ್‌ನ ರಾಯಲ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ವೀಪ್ ಸಮಿತಿ ಹಾಗೂ ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಸಂವಾದ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾರ್ಚ್ 16ರೊಳಗೆ ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ನೋಂದಣಿ ಮಾಡಿಸಿ ಎಪಿಕ್ ಕಾರ್ಡ್(ಭಾವಚಿತ್ರವಿರುವ ಮತದಾನದ ಗುರುತಿನ ಚೀಟಿ) ಪಡೆಯಬೇಕು. ಈಗಾಗಲೇ ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಗೊಳಿಸಲಾಗಿದ್ದು, ಮಾರ್ಚ್ 16ರ ವರೆಗೆ ನೋಂದಣಿ ಕಾರ್ಯ ನಡೆಯಲಿದೆ. ಯಾವುದೇ ಮತದಾರರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಬಾರದು. ಎಲ್ಲ ಮತದಾರರು ನೋಂದಣಿ ಮಾಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನೋಂದಣಿಯಾದ ಮತದಾರ ಮತದಾನ ಮಾಡುವಂತೆ ಜಾಗೃತಿ ವಹಿಸಬೇಕು ಎಂದರು. ನೋಂದಣಿಯಾದ ಮತದಾರರ, ಪ್ರದೇಶ, ಲಿಂಗ, ಸಮುದಾಯ ಸೇರಿದಂತೆ ಅಗತ್ಯ ವಿವರ ಸಂಗ್ರಹಿಸಬೇಕು. ಸಮುದಾಯದ ಅಗತ್ಯತೆ ಅರಿತು ಅವರಿಗೆ ಅನುಗುಣವಾಗಿ ಯೋಜನೆ ರೂಪಿಸಿ ಜಾಗೃತಿ ಮೂಡಿಸಿ ನೋಂದಣಿ ಮಾಡಿಸಬೇಕು. ಮತದಾನವು ಮತದಾರರ ಹಕ್ಕಾಗಿದ್ದು, ಸಂಬಂಧಿಸಿದ ಕ್ಷೇತ್ರದ ವ್ಯಾಪ್ತಿಯೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿಗೆ ವಾಸಸ್ಥಳದ ಪ್ರಮಾಣ ಪತ್ರ, ವಯಸ್ಸಿನ ದೃಢೀಕರಣ ಪತ್ರ ಹಾಗೂ ಅದಕ್ಕೆ ಪೂರಕ ದಾಖಲಾತಿಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರಗುಡಿ ಮಾತನಾಡಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ, ಕಾಲೇಜಿನ ಉಪಾಧ್ಯಕ್ಷ ಅಖಿಲ್ ಅಹ್ಮದ್, ವಿದ್ಯಾರ್ಥಿಗಳು ಮತ್ತಿತರರು ಪಾಲ್ಗೊಂಡಿದ್ದರು. ಬಳ್ಳಾರಿ ನಗರದ ಕೌಲ್‌ಬಜಾರ್‌ನ ರಾಯಲ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ವೀಪ್ ಸಮಿತಿ ಹಾಗೂ ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಸಲಾವುದ್ದೀನ್ ಚಾಲನೆ ನೀಡಿದರು.