ಉತ್ಪಾದಕ ಚಟುವಟಿಕೆಗೆ ಸಾಲ ಬಳಕೆಯಿಂದ ಪ್ರಗತಿ
ಸಿರುಗುಪ್ಪ: ವಿದ್ಯಾಭ್ಯಾಸ, ಕೃಷಿ ಉಪಕರಣಗಳಿಗೆ ಸಾಲ ಹಾಗೂ ಎಲ್ಲ ಅಗತ್ಯಗಳಿಗನುಗುಣವಾಗಿ ಸಾಲ ಯೋಜನೆಗಳನ್ನು ರೂಪಿಸಲಾಗಿದ್ದು, ಉತ್ಪಾದಕತೆ ಚಟುವಟಿಕೆಗೆ ಮಾತ್ರ ಸಾಲ ಸೌಲಭ್ಯವನ್ನು ಬಳಸಿದಾಗ ಆರ್ಥಿಕ ಪ್ರಗತಿ ಸಾಧ್ಯ ಎಂದು ಸಿಂಡಿಕೇಟ್ ಬ್ಯಾಂಕ್ ಮುಖ್ಯ ಪ್ರಬಂಧಕ ಎಸ್.ಎಂ. ಗೋರೆಬಾಳ್ ತಿಳಿಸಿದರು.
ಪಟ್ಟಣದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಭಾರತೀಯ ಪ್ರಬಂಧ ಸಂಸ್ಥೆ, ಬೆಂಗಳೂರು ಗ್ಲಾಸ್‌ಗೋ ವಿಶ್ವವಿದ್ಯಾಲಯ, ಯುಕೆ ಹಾಗೂ ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ್ದ ರೈತರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಠೇವಣಿದಾರರು ಹಾಗೂ ಸಾಲಗಾರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬ್ಯಾಂಕ್‌ಗಳಿಗೆ ಠೇವಣಿದಾರರು ಎಷ್ಟು ಮುಖ್ಯವೋ ಸಾಲಗಾರರು ಅಷ್ಟೇ ಮುಖ್ಯ. ಬ್ಯಾಂಕಿನಲ್ಲಿ ಠೇವಣಿ ಜತೆಗೆ ತಮಗೆ, ಕೇವಲ ಉದ್ಯಮಿಗಳು ಮಾತ್ರ ಆರ್ಥಿಕ ಅಭಿವೃದ್ಧಿ ಹೊಂದಿದರೆ ಸಾಲದು, ಜನಸಾಮಾನ್ಯರು ಆರ್ಥಿಕ ಅಭಿವೃದ್ಧಿ ಹೊಂದಲು ಕಡ್ಡಾಯವಾಗಿ ಪ್ರತಿ ಕುಟುಂಬಗಳು ಬ್ಯಾಂಕಿನಲ್ಲಿ ಖಾತೆ ಹೊಂದಿದಾಗ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆಯಬಹುದೆಂದು ಸಲಹೆ ನೀಡಿದರು.
ಡಾ. ಬಸವಣ್ಣೆಪ್ಪ ಮಾತನಾಡಿ, ಒಂದು ಕೆಜಿ ಬತ್ತ ಬೆಳೆಯಲು 5 ಸಾವಿರ ಲೀ. ನೀರು ಬೇಕಾಗುತ್ತದೆ. ಅದೇ ನೀರನ್ನು ಬಳಸಿಕೊಂಡು ತೃಣಧಾನ್ಯಗಳನ್ನು ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಮಧುಮೇಹ ಕಾಯಿಲೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ನವಣೆ, ರಾಗಿ, ಸಜ್ಜೆ, ಧಾನ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಎಫ್.ಬಿ. ಬಾಳೇಕಾಯಿ, ಡಾ. ದೀಪಕ್ ಮುಖರ್ಜಿ, ಡಾ. ಟಿ.ಎನ್. ಶಶಿಧರ, ಡಾ. ಸುಶೀಲ್ ನಾಡಗೌಡ, ಡಾ. ಸವಿತಾ ಎ.ಎಸ್ ಇತರರು ಉಪಸ್ಥಿತರಿದ್ದರು.