ಎನ್.ವೈ. ಹನುಮಂತಪ್ಪ ಗೆಲವಿಗೆ ಶ್ರಮಿಸಿ
ಕನ್ನಡಪ್ರಭ ವಾರ್ತೆ, ಸಂಡೂರು, ಮಾ. 14
ಸಮಾಜದ ಎಲ್ಲ ವರ್ಗದವರ ಏಳ್ಗೆಗಾಗಿ ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವ ಕಾಂಗ್ರೆಸ್‌ಗೆ ಬೆಂಬಲ ನೀಡಿ, ಮಾಜಿ ಸಂಸದ, ನಿವೃತ್ತ ನ್ಯಾಯಾಧೀಶ ಎನ್.ವೈ. ಹನುಮಂತಪ್ಪ ಗೆಲವಿಗೆ ಶ್ರಮಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕೆಪಿಸಿಸಿ ಕಾರ್ಯದರ್ಶಿ ಚಿನ್ನಸ್ವಾಮಿ ಕರೆ ನೀಡಿದರು.
ಪಟ್ಟಣದ ಕೃಷ್ಣಾನಗರದ ಲಾಡ್ ಮನೆಯ ಆವರಣದಲ್ಲಿ ಜರುಗಿದ ಭಾರತ ನಿರ್ಮಾಣ ಯಾತ್ರೆ ಮತ್ತು ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬೆಂಗಳೂರು ಮೆಟ್ರೋ ರಲ್ವೆ ಮಾದರಿಯಲ್ಲೇ ಬಳ್ಳಾರಿಗೂ ಮೆಟ್ರೋ ರೈಲು ಬಿಡುವ ಭರವಸೆ ನೀಡಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಹೊತ್ತಿರುವ ಕೆಪಿಸಿಸಿ ಕಾರ್ಯದರ್ಶಿ ವೆಂಕಟ್‌ರಾವ್ ಘೋರ್ಪಡೆ ಮಾತನಾಡಿ, ಮಾಹಿತಿ ಹಕ್ಕು, ಉದ್ಯೋಗ ಖಾತ್ರಿ, ಶಿಕ್ಷಣ ಹಕ್ಕು, ಆಹಾರ ಭದ್ರತೆ ಸೇರಿದಂತೆ ಉಪಯುಕ್ತ ಕಾಯ್ದೆಗಳನ್ನು ಜಾರಿಗೆ ತರುವುದರ ಮೂಲಕ ಅರವತ್ತು ವರ್ಷ ಕಳೆದರೂ ಕಾಂಗ್ರೆಸ್ ಜೀವಂತವಾಗಿದೆ ಎಂದರು.
ಪ್ರಚಾರದಲ್ಲಿ ಮೋದಿ ಮುಂದೆ ಇದ್ದು, ಫಲಿತಾಂಶದ ನಂತರ ಅವರ ನಿಜ ಬಣ್ಣ ಬಯಲಾಗಲಿದೆ. 371 ಜೆ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳ್ಳಲಿದ್ದು ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿಯ ಸಾವಿರಾರು ವಿದ್ಯಾವಂತರು ಸರ್ಕಾರಿ ನೌಕರರಾಗಲಿದ್ದಾರೆ ಎಂದರು.
ಬಳ್ಳಾರಿ ನಗರ ಶಾಸಕ ಅನಿಲ್ ಎಚ್. ಲಾಡ್ ಮಾತನಾಡಿ, ಶ್ರೀರಾಮುಲು ದೇಶದ ಸ್ವಾಭಿಮಾನ ಉಳಿಸಲು ಬಿಜೆಪಿ ಸೇರುತ್ತಿರುವುದಾಗಿ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. 24 ಕ್ಯಾರೆಟ್ ಗೋಲ್ಡ್ ಎಂದವರು ಈಗ ಎಲ್ಲಿದ್ದಾರೆ? ಓವರ್‌ನೈಟ್ ಶ್ರೀಮಂತರಾದರೆ ಏನು ಗತಿ ಎಂಬುದು ಎಲ್ಲರಿಗೆ ಗೊತ್ತಿದೆ. ಸಾಮಾಜಿಕ ಬದ್ಧತೆಗಳಿರುವ ಮನುಷ್ಯನನ್ನು ದೇವರು ಕಾಪಾಡುತ್ತಾನೆ. ಆತನನ್ನು ಮೋಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಶಾಸಕ ಈ. ತುಕಾರಾಂ ಸಭೆ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಪಕ್ಷದ ಲೋಕಸಭೆ ಅಭ್ಯರ್ಥಿ ಎನ್.ವೈ. ಹನುಮಂತಪ್ಪ, ಕಮಲಾ ಮರಿಸ್ವಾಮಿ, ಗಿರಿಮಲ್ಲಪ್ಪ, ಬಿ.ಕಾಂ. ಮಾಬುಸಾಬ್, ಡಿ. ಕೃಷ್ಣಪ್ಪ, ಆಶಾಲತಾ ಸೋಮಪ್ಪ, ಸೌಭಾಗ್ಯಮ್ಮ, ರೋಷನ್ ಜಮೀರ್, ಜಿಪಂ ಸದಸ್ಯರಾದ ಲಕ್ಷ್ಮಣ್, ಲತಾ ಚಂದ್ರಶೇಖರ್, ಪುಷ್ಪಾ ಶಿವಮೂರ್ತಿ, ಬಂಡ್ರಿ ರವಿಕುಮಾರ್, ಉಜ್ಜನಗೌಡ, ಹಿರೇಕೆರನಹಳ್ಳಿ ಜಯರಾಂ, ಜಿ. ಉಮೇಶ್, ಎನ್.ಎಂ. ವಿರೇಶ್, ಕುರೇಕುಪ್ಪ ಸೋಮಪ್ಪ, ಪುರಸಭೆ ಸದಸ್ಯರಾದ ರಾಘವೇಂದ್ರ, ನಬೀಸಾಬ್, ಕೆ. ಸುರೇಶ್, ಮಾಜಿ ಸದಸ್ಯರಾದ ಅನಂತ್ ನಾಯ್ಡು, ಟಿ. ನಾಗರಾಜ್ ಇತರರು ಭಾಗವಹಿಸಿದ್ದರು.