ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದೇಶದ ಭವಿಷ್ಯ ತೀರ್ಮಾನಿಸುವ ಚುನಾವಣೆ

Lingaraj Badiger
Updated On : 15 Mar 2014, 12:39 pm

ಬಳ್ಳಾರಿ: ಈ ಬಾರಿ ಲೋಕಸಭಾ ಚುನಾವಣೆ ಎಲ್ಲ ಚುನಾವಣೆಯಂಥಲ್ಲ. ಒಂದು ರಾಜಕೀಯ ಪಕ್ಷ ಮತ್ತೊಂದು ರಾಜಕೀಯ ಪಕ್ಷದ ನಡುವಿನ ಚುನಾವಣೆಯಲ್ಲ. ದೇಶದ ಜನ ತೀರ್ಮಾನಿಸಿದ್ದು, ದೇಶದ ಭವಿಷ್ಯವನ್ನು ತೀರ್ಮಾನ ಮಾಡುವ ಚುನಾವಣೆ. ಸ್ವಾತಂತ್ರ್ಯ ನಂತರದ ಸ್ವಾಭಿಮಾನ ಜಾಗೃತಿ ಮಾಡುವ ಚುನಾವಣೆ. ನರೇಂದ್ರ ಮೋದಿ ಪ್ರಧಾನಿಯನ್ನಾಗಿ ಮಾಡುವ ಚುನಾವಣೆ ಎಂದು ಬಿಜೆಪಿ ಮುಖಂಡ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಲೋಕಸಭಾ ಚುನಾವಣೆ ನಿಮಿತ್ತ ನಗರದ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿಸಲು ದೇಶದ ಪ್ರತಿಯೊಬ್ಬ ಯುವಕರು ಪಣ ತೊಟ್ಟಿದ್ದಾರೆ. ದೇಶ ನಮ್ಮದು ಎಂಬ ಭಾವನೆಯನ್ನಿಟ್ಟುಕೊಂಡು ಮತದಾರರನ್ನು ಜಾಗೃತಿಗೊಳಿಸುತ್ತಿದ್ದೇವೆಯೇ ವಿನಃ ಮುಸ್ಲಿಮರು ಕಾಂಗ್ರೆಸ್ ಪರ, ಬಿಜೆಪಿ ಹಿಂದೂಗಳ ಪರ ಎಂಬ ಯಾವುದೇ ಕೋಮು ಭಾವನೆ ಇಲ್ಲ. ದೇಶದ ಪ್ರತಿಯೊಬ್ಬ ಸಮುದಾಯದವರು ನಮ್ಮವರೇ ಎಂಬ ಧ್ಯೇಯ ಬಿಜೆಪಿ ಹೊಂದಿದೆ ಎಂದರು.
24ಕ್ಕೂ ಹೆಚ್ಚು ಸ್ಥಾನ
ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಹ್ಯಾರೀಸ್, ಜಾಫರ್ ಶರೀಫ್ ಅಂತಹ ಮುಖಂಡರೇ ಕಾಂಗ್ರೆಸ್ ಸರ್ಕಾರ ದಲಿತರನ್ನು, ಹಿಂದುಳಿದವರನ್ನು ತುಳಿದಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಹಣೆಬರಹ ಇದರಿಂದಲೇ ತಿಳಿಯುತ್ತದೆ ಎಂದು ಟೀಕಿಸಿದರು. ಮಾಧ್ಯಮಗಳಲ್ಲಿ ಲೋಕಸಭೆ ಚುನಾವಣೆ ಕುರಿತು ಸಮೀಕ್ಷೆಯಾಗುತ್ತಿದ್ದು, ಆರಂಭದಲ್ಲಿ 6ರ ಸ್ಥಾನ ಗಳಿಸುವ ಸಾಧ್ಯತೆ ಇದ್ದ ಬಿಜೆಪಿ ಈಗ 20ಕ್ಕೂ ಹೆಚ್ಚು ಸ್ಥಾನ ಗಳಿಸುವ ಸ್ಥಿತಿಯಲ್ಲಿದೆ. ಈ ಚುನಾವಣೆಯಲ್ಲಿ ರಾಜ್ಯದಲ್ಲಿ 24ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಾಗಾರಕ್ಕೂ ಮುನ್ನ ಮಾಜಿ ಸಂಸದ ಎಸ್. ಮಲ್ಲಿಕಾರ್ಜುನಯ್ಯ ಹಾಗೂ ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಂಗಾರು ಲಕ್ಷ್ಮಣ್ ನಿಧನಕ್ಕೆ ಎರಡು ನಿಮಿಷಗಳ ಕಾಲ ಮೌನಾಚರಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲಿಂಗನಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಎಚ್. ಹನುಮಂತಪ್ಪ, ರಾಮಲಿಂಗಪ್ಪ, ಮುರಾಹರಿಗೌಡ, ಸಂಜೀವ್, ಸಿದ್ದೇಶ್ ಯಾದವ್, ಪಾರ್ವತಿ ಇಂದೂಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement