ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಾಂಗ್ರೆಸ್‌ಗೆ ಅಗಣಿತ ಗೆಲವು ಕೊಟ್ಟಿದ್ದ ಬಳ್ಳಾರಿ

Lingaraj Badiger
Updated On : 19 Mar 2014, 12:19 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 18
1991ರ ತನಕ ಬಳ್ಳಾರಿಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಬಿಜೆಪಿ ಈ ಬಾರಿ ಹ್ಯಾಟ್ರಿಕ್ ಸಾಧಿಸುವ ತವಕದಲ್ಲಿದೆ. ಅಲ್ಲಿಯವರೆಗೂ ಏಕಚಕ್ರಾಧಿಪತಿಯಂತೆ ಮೆರೆದಿದ್ದ ಕಾಂಗ್ರೆಸ್ ಈಗ ತನ್ನ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿದೆ.
ಗಣಿಗಾರಿಕೆಯಿಂದ ದೇಶದ ಗಮನ ಸೆಳೆದ ಬಳ್ಳಾರಿಯ ಚುನಾವಣೆ ಕಥೆ ಇದು. 1952, 1957ರಲ್ಲಿ ನಡೆದ ಮೊದಲೆರಡು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಯಾವ ರಾಜಕೀಯ ಪಕ್ಷವೂ ಸ್ಪರ್ಧೆ ಒಡ್ಡಿರಲಿಲ್ಲ. ಆಮೇಲೂ ಪಕ್ಷೇತರ ಅಭ್ಯರ್ಥಿಗಳೇ ಕಾಂಗ್ರೆಸ್‌ಗೆ ತಲೆನೋವಾದರು. ವೈ. ಮಹಾಬಳೇಶ್ವರಪ್ಪ ಕಾಂಗ್ರೆಸ್ ಅಭ್ಯರ್ಥಿ ಟಿ. ಸುಬ್ರಹ್ಮಣ್ಯಂ ವಿರುದ್ಧ ಸ್ಪರ್ಧಿಸಿ 30,361 ಮತಗಳಿಂದ ಗೆದ್ದರು. ಮುಂದಿನ ಚುನಾವಣೆಯಲ್ಲಿ 26,288 ಮತಗಳಿಂದ ಗೆದ್ದ ಕಾಂಗ್ರೆಸ್ ಮುಯ್ಯಿ ತೀರಿಸಿಕೊಂಡಿತು.
ಸ್ವತಂತ್ರ ಪಾರ್ಟಿ ಪ್ರಬಲ ಸ್ಪರ್ಧಿ: 1962ರಿಂದ ಕಾಂಗ್ರೆಸ್‌ಗೆ ಪ್ರಬಲ ಎದುರಾಳಿಯಾಗಿದ್ದು ಸ್ವತಂತ್ರ ಪಾರ್ಟಿ (ಎಸ್‌ಡಬ್ಲ್ಯುಎ). 1962ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ. ಸುಬ್ರಹ್ಮಣ್ಯಂ ಅವರಿಗೆ ಸ್ವತಂತ್ರ ಪಾರ್ಟಿಯ ಜೆ. ಮಹ್ಮದ್ ಇಮಾಮ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು. ಕಾಂಗ್ರೆಸ್ ಸ್ವಲ್ಪ ಅಂತರದಲ್ಲಿ (11,317 ಮತ) ಗೆಲವು ಸಾಧಿಸಿತು. 1967 ಮತ್ತು 1971ರಲ್ಲೂ ಫಲಿತಾಂಶ ಪುನರಾವರ್ತನೆಯಾಯಿತು. 1977ರಲ್ಲಿ ಕಾಂಗ್ರೆಸ್‌ಗೆ ಭಾರತೀಯ ಲೋಕದಳ ಸೆಡ್ಡು ಹೊಡೆಯಿತು. ಆದರೂ ಕಾಂಗ್ರೆಸ್ 1,45,544 ಮತಗಳಿಂದ ಗೆದ್ದು ಲೋಕದಳವನ್ನು ಧೂಳಿಪಟ ಮಾಡಿತು.
ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್: 1980ರ ಅವಧಿಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಐ ಹಾಗೂ ಯು ಬಣಗಳ ನಡುವೆ ಪೈಪೋಟಿ ನಡೆಯಿತು. ಐ ನಿಂದ ಆರ್.ವೈ. ಘೋರ್ಪಡೆ ಸ್ಪರ್ಧಿಸಿದರೆ, ಅವರ ಸಹೋದರ ಎಂ.ವೈ. ಘೋರ್ಪಡೆ ಯು ಬಣದಿಂದ ಎದುರಾಳಿ. ಸಹೋದರ ಸವಾಲ್ ಆಗಿ ಚುನಾವಣೆಯ ರಂಗೇರಿತು. ಜೆಎನ್‌ಪಿ (ಜನತಾ ಪಾರ್ಟಿ) ಲಾಭ ಪಡೆಯಲೆತ್ನಿಸಿದರೂ ಮತದಾರ ಕಾಂಗ್ರೆಸ್ (ಐ) ಆಯ್ಕೆ ಮಾಡಿಕೊಂಡ. 1984ರ ಅವಧಿಯಲ್ಲಿ ಕಾಂಗ್ರೆಸ್‌ಗೆ ಜನತಾ ಪಾರ್ಟಿ ಪ್ರಬಲ ಸ್ಪರ್ಧಿಯಾಗಿತ್ತು. ಎಂ.ಪಿ. ಪ್ರಕಾಶ್ ಜನತಾ ಪಾರ್ಟಿಯ ಅಭ್ಯರ್ಥಿಯಾಗಿದ್ದರೂ ಕಾಂಗ್ರೆಸ್‌ನ ಬಸವರಾಜೇಶ್ವರಿ ಗೆಲವು ಸಾಧಿಸಿದರು. 1989ರ ಅವಧಿಯಲ್ಲಿ ಜನತಾದಳ ಮುಂಚೂಣಿಗೆ ಬಂತು, ಜನತಾ ಪಾರ್ಟಿ ಮೂರನೇ ಸ್ಥಾನಕ್ಕೆ ಜಾರಿತು.
ಮೊದಲ ಬಾರಿ ಸ್ಪರ್ಧೆ: 1991ರ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಭ್ಯರ್ಥಿ ಕಣಕ್ಕಿಳಿಸಿತು. ಕಾಂಗ್ರೆಸ್ 2,34,812 ಮತ ಗಳಿಸಿ ಗೆದ್ದರೆ, ಎರಡನೇ ಸ್ಥಾನ ಪಡೆದ ಜನತಾದಳದ ಗಳಿಕೆ 1,68,831 ಮತಗಳು.  ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ. ನಾಗಭೂಷಣಂ 84,837 ಮತ ಪಡೆದಿದ್ದರು. 1998ರಲ್ಲಿ ಬಿಜೆಪಿ ಕಣಕ್ಕಿಳಿಯಲಿಲ್ಲ. ಲೋಕಶಕ್ತಿ, ಜನತಾದಳ ಪೈಪೋಟಿ ನೀಡಿದರೂ, ಗೆದ್ದಿದ್ದು ಕಾಂಗ್ರೆಸ್.
1999 ಬದಲಾವಣೆಯ ಪರ್ವ: 1999ರ 13ನೇ ಲೋಕಸಭಾ ಚುನಾವಣೆ ಬಿಜೆಪಿಗೆ ಬದಲಾವಣೆ ಪರ್ವವಾಯಿತು. ಆಗ ಕಾಂಗ್ರೆಸ್‌ನ ಸೋನಿಯಾ ಗಾಂಧಿ- ಬಿಜೆಪಿ ಅಭ್ಯರ್ಥಿ ಸುಷ್ಮಾ ಸ್ವರಾಜ್ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಸೋನಿಯಾ ಗಾಂಧಿ 4,14,650 ಮತ ಗಳಿಸಿ ಗೆದ್ದರೆ, ಸುಷ್ಮಾ ಸ್ವರಾಜ್ 3,58,550 ಮತ ಪಡೆದರು. ಅಲ್ಲಿಂದ ಬಿಜೆಪಿ ಬಲಿಷ್ಠವಾಯಿತು. ಸೋನಿಯಾ ಪದತ್ಯಾಗದ ಬಳಿಕ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ, 2004ರಲ್ಲಿ ಬಿಜೆಪಿಯ ಕರುಣಾಕರ ರೆಡ್ಡಿ ಲೋಕಸಭೆ ಪ್ರವೇಶಿಸಿದರು. 2009ರಲ್ಲಿ ಜೆ. ಶಾಂತಾ ಸರದಿ. ಕಾಂಗ್ರೆಸ್ ಕೋಟೆ ಭದ್ರವಾಗುವುದೇ? ಬಿಜೆಪಿ ಹ್ಯಾಟ್ರಿಕ್ ಕನಸು ನನಸಾಗುವುದೇ? ಎಂಬುದು ಈ ಬಾರಿಯ ಕುತೂಹಲ.
- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement