ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಾಲೇಜ್‌ಗೆ ಗುಡ್‌ಬೈ ಕೃಷಿಗೆ ಜೈ

Lingaraj Badiger
Updated On : 19 Mar 2014, 12:26 pm

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮಾ. 18
ಇರುವ ಒಬ್ಬ ಮಗ ಚೆನ್ನಾಗಿ ಓದಿ ಸರ್ಕಾರಿ ನೌಕರಿ ಪಡೆಯಬೇಕು ಎನ್ನುವುದು ತಂದೆ, ತಾಯಿ ಆಸೆ. ಆದರೆ ಪಿಯುಸಿ ವರೆಗೆ ಓದಿದ ಆ ಯುವಕನಿಗೆ ಯಾಕೊ ಏನೋ ಓದುವುದು ಬೇಡ ಅನ್ನಿಸಿ ಕೃಷಿಯತ್ತ ಮುಖ ಮಾಡಿದ. ತಂದೆ, ತಾಯಿ, ಸಂಬಂಧಿಗಳ ವಿರೋಧದ ನಡುವೆಯೂ ಇದ್ದ 9 ಎಕರೆ ಭೂಮಿಯಲ್ಲಿ ನೇಗಿಲು ಹೂಡಿ ರೈತನಾದ.
ಕೃಷಿಯನ್ನೇ ನಂಬಿ ಹೋದ ಆ ಯುವಕ ಇಂದು ಪ್ರತಿವರ್ಷ ರು. 3 ಲಕ್ಷ ಲಾಭ ಗಳಿಸುತ್ತಿದ್ದು, ಕೃಷಿಯನ್ನು ಖುಷಿಯಿಂದ ಮಾಡಿದರೆ ನಷ್ಟವಿಲ್ಲ ಎಂದು ತೋರಿಸಿಕೊಟ್ಟಿದ್ದಾನೆ. ಅಂದು ವೃವಸಾಯ ಮಾಡುವುದು ಬೇಡ ಎಂದಗಿದ್ದ ತಂದೆ, ತಾಯಿ, ಸಂಬಂಧಿಗಳು, ಎಲ್ಲರೂ ಈ ಯುವಕನ ಛಲಕ್ಕೆ ಶರಣು ಎಂದಿದ್ದಾರೆ.
ಇದು ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಸಮೀಪದ ಮಾಕನಡಕು ಗ್ರಾಮದ ಎಸ್.ವಿ. ವೀರಭದ್ರಪ್ಪ ಅವರ ಪುತ್ರ 30ರ ಹರೆಯದ ಎಸ್.ವಿ. ಬಸವರಾಜನ ಯಶೋಗಾಥೆ. ಈತ ಕಾಲೇಜ್‌ಗೆ ಗುಡ್‌ಬೈ ಹೇಳಿ ಕೃಷಿಯಲ್ಲಿ ತೊಡಗಿ ಸೈ ಎನಿಸಿಕೊಂಡಿದ್ದಾನೆ. ಐದಾರು ಜರ್ಸಿ ಆಕಳು, ಇರುವ 9 ಎಕರೆಯಲ್ಲಿ 2 ಎಕರೆ ರೇಷ್ಮೆ, 1 ಎಕರೆ ಬತ್ತ, 1 ಎಕರೆ ತರಕಾರಿ, 1 ಎಕರೆ ಹುಲ್ಲು, ತಲಾ 2 ಎಕರೆಯಲ್ಲಿ ಮೆಕ್ಕೆಜೋಳ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಬಸವರಾಜ, ಪ್ರತಿವರ್ಷ ಎಲ್ಲ ಖರ್ಚು ತೆಗೆದು ರು. 3 ಲಕ್ಷ ಲಾಭ ಪಡೆಯುತ್ತಿದ್ದಾನೆ. ಕೃಷಿ ಬೇಡ ಎಂದಿದ್ದ ಪೋಷಕರಿಗೆ, ಸುತ್ತಮುತ್ತಲ ರೈತರಿಗೆ ಈತ ಪಾಠವಾಗಿದ್ದಾನೆ. ಉನ್ನತ ವ್ಯಾಸಂಗ ಮಾಡಿ ಸರ್ಕಾರಿ, ಅರೆ ಸರ್ಕಾರಿ, ಗುತ್ತಿಗೆ ನೌಕರಿಗಾಗಿ ಅಲೆಯುತ್ತಿರುವ ಇಂದಿನ ದಿನಗಳಲ್ಲಿ ಯಾವ ಸರ್ಕಾರಿ ನೌಕರಿಗೂ ಕಡಿಮೆ ಇಲ್ಲದಂತೆ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಿದ ಬಸವರಾಜ ಇಂದಿನ ಯುವಕರಿಗೆ ಮಾದರಿಯಾಗಿದ್ದಾನೆ.
ಬರಿಗೈಯಲ್ಲಿ ಕೃಷಿ ಮಾಡಿದ ಯುವಕ: ಕೃಷಿಗೆ ಇಳಿಯುವ ಮೊದಲು ಬಸವರಾಜನಿಗೆ ಯಾವ ಬಂಧುಗಳು ಹತ್ತು ರುಪಾಯಿ ಕೊಡಲಿಲ್ಲ. ಕಾರಣ ಈ ಹುಡುಗ ಬೇಸಾಯ ಮಾಡಲು ಬಂದು ಕಷ್ಟ ಪಡುವುದು ಯಾಕೆ ಎನ್ನುವ ವಿಚಾರ ಅವರದ್ದು. ನಾವು ಹಣ ಕೊಡದಿದ್ರೆ ಅವನು ಕೃಷಿ ಹೇಗೆ ಮಾಡ್ತಾನೆ? ಮತ್ತೆ ಓದಲು ಹೋಗ್ತಾನೆ ಎನ್ನುವುದು ಪೋಷಕರ, ಬಂಧುಗಳ ಅನಿಸಿಕೆ. ಆದರೆ ಅವರ ವಿಚಾರವನ್ನು ಬಸವರಾಜ ಸುಳ್ಳು ಮಾಡಿದ. ಛಲಬಿಡದೆ ಮನೆಯಲ್ಲಿದ್ದ ಹತ್ತಾರು ಜವಾರಿ ದನಗಳನ್ನು ಮಾರಿ ಅದರಲ್ಲಿ 2 ಜರ್ಸಿ ಆಕಳು ತಂದು ಜಮೀನಿನ ಸ್ವಲ್ಪ ಭಾಗದಲ್ಲಿ ಹುಲ್ಲು ಬೆಳೆಸಿದ,  ಹಾಲು ಮಾರಿ ಮನೆ ಖರ್ಚು ನಿಭಾಯಿಸಿದೆ. ನಂತರ ರೇಷ್ಮೆ ನಾಟಿ ಮಾಡಿ ಪ್ರತಿ ತಿಂಗಳು ಖರ್ಚು ತೆಗೆದು ಐದಾರು ಸಾವಿರ ಲಾಭ ಪಡೆದ. ಕಡಿಮೆ ಖರ್ಚಿನ ತರಕಾರಿ ಬೆಳೆ ಹಾಕಿ ಲಾಭ ಕಂಡುಕೊಂಡ. ಹೀಗೆ ವರ್ಷದಿಂದ ವರ್ಷಕ್ಕೆ ಲಾಭ ಹೆಚ್ಚಾಗುತ್ತಾ ಹೋಯಿತು. 2 ಇದ್ದ ಜರ್ಸಿ ಆಕಳು ಈಗ ಎಂಟತ್ತು ಆಗಿವೆ.
ಇರುವ ಎಲ್ಲ ಆಕಳುಗಳು ರೇಷ್ಮೆ ಸೊಪ್ಪು, ಹುಲ್ಲು ಮೇಯುತ್ತವೆ. ಆಕಳಿಂದ ಬರುವ ಸಾವಯವ ಗೊಬ್ಬರವನ್ನು ಜಮೀನಿಗೆ ಹಾಕಲಾಗುತ್ತೆ, ದುಬಾರಿ ರಾಸಾಯನಿಕ ಈ ಜಮೀನಿನಿಂದ ದೂರ. ಹೀಗಾಗಿ ಖರ್ಚು ಬಹಳ ಕಡಿಮೆ. ತಂದೆ, ತಾಯಿ ಮನೆಯವರೆಲ್ಲರೂ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಈ ಯುವಕ ಬಸವರಾಜಗೆ ಕೃಷಿಯಲ್ಲಿ ನಷ್ಟ ಎನ್ನುವುದೆ ಇಲ್ಲ. ಜಮೀನಿನಲ್ಲಿ ರೇಷ್ಮೆಗಾಗಿ ಒಂದು ಪ್ರತ್ಯೇಕ ಮನೆ, ಊರಲ್ಲೂ ವಾಸಕ್ಕೆ ಒಂದು ಮನೆ ಕಟ್ಟಿಸಿದ್ದಾನೆ. ಮನೆಯವರಿಗೆಲ್ಲ ಜೀವವಿಮೆ ಮಾಡಿಸಿದ್ದಾನೆ. ಈಗ ಅಪ್ಪ, ಅಮ್ಮ, ಬಂಧುಗಳು ಎಲ್ಲ ಖುಷಿಯಾಗಿದ್ದಾರೆ. ಮಗನ ಹೆಜ್ಜೆ ತಪ್ಪಾಗಿಲ್ಲ ಸರಿಯಾಗಿಯೆ ಇದೆ ಎಂದು ಬಸವರಾಜನ ಈ ಸಾಧನೆಯನ್ನು ಕಂಡು ಹೆಮ್ಮೆ ಪಡುತ್ತಾರೆ ತಂದೆ, ತಾಯಿ, ಬಂಧುಗಳು.
ಕೃಷಿ ತಜ್ಞನಾಗಿರುವ ಯುವಕ: ಕೃಷಿಯಲ್ಲಿ ಹತ್ತು ವರ್ಷಗಳ ಅನುಭವವಿರುವ ಬಸವರಾಜ 18 ವಯಸ್ಸಿನಿಂದಲೆ ಬೇಸಾಯದಲ್ಲಿ ತನ್ನನ್ನು ತೊಡಗಿಸಿಕೊಂಡ ಈತ. ಕೃಷಿಯಿಂದ ಪ್ರತಿವರ್ಷ ಸಾಲಗಾರರಾಗುತ್ತಿರುವ ರೈತರಿಗೆ ಸರಿಯಾಗಿ ಕೃಷಿ ಮಾಡಿದರೆ ಸಾಲ ಮಾಡುವ ಪ್ರಮೆಯವೇ ಬರುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾನೆ. ರಾಸಾಯನಿಕ ಗೊಬ್ಬರವನ್ನು ಸುರಿದು ಜಮೀನು ಹಾಳು ಮಾಡಿ, ತಾವು ನಷ್ಟ ಅನುಭವಿಸಿ ಕೃಷಿ ಸಹವಾಸವೆ ಬೇಡ ಎನ್ನುವ ಬಯಲು ಸೀಮೆಯ ರೈತರ ನಾಡಲ್ಲಿ ಬಸವರಾಜ (7406558528)ನಂತಹ ಯುವಕ ಮರಳುಗಾಡಿನ ಓಯಸಿಸ್‌ನಂತೆ ಕಾಣುತ್ತಾನೆ.
-ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement