ಗ್ರಾಪಂ ಮೂಲಕ ನೇರ ನೇಮಕಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ, ಸಂಡೂರು, ಮಾ. 18
ಬಾಕಿ ವೇತನ ನೀಡುವ ಜತೆಗೆ, ಗಣಕಯಂತ್ರ ನಿರ್ವಾಹಕರನ್ನು ಗ್ರಾಪಂಗಳ ಮೂಲಕ ನೇರ ನೇಮಕ ಮಾಡಿಕೊಳ್ಳಬೇಕೆಂದು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಕಯಂತ್ರ ನಿರ್ವಾಹಕರು ತಾಪಂ ಇಒ ಅವರನ್ನು ಒತ್ತಾಯಿಸಿ, ಮನವಿಪತ್ರ ಸಲ್ಲಿಸಿದರು.
ಗ್ರಾಪಂಗಳಲ್ಲಿ ಗಣಕಯಂತ್ರಗಳನ್ನು ನಿರ್ವಹಿಸಲು ಹೋಂ ಸೆಕ್ಯೂರಿಟಿ ಎಂಬ ಎನ್ಜಿಒ ಮೂಲಕ ನೇಮಿಸಿಕೊಂಡು ಇದೀಗ 9 ತಿಂಗಳಿಂದ ವೇತನ ನೀಡಿಲ್ಲ. ಕಳೆದ ವರ್ಷದ ಪಿಎಫ್ ಹಣ ಸಂದಾಯ ಮಾಡಿಲ್ಲ. ಉದ್ಯೋಗ ಖಾತ್ರಿ, ವಸತಿ ಯೋಜನೆ, ಗ್ರಾಮ ಸ್ವರಾಜ್ ಸೇರಿದಂತೆ ಗ್ರಾಪಂಗಳ ಎಲ್ಲ ಯೋಜನೆಗಳು ಆನ್ಲೈನ್ ಮೂಲಕ ನಿರ್ವಹಿಸಲಾಗುತ್ತಿದೆ. ಇದಕ್ಕಾಗಿ ಅಗತ್ಯವಿರುವ ಗಣಕಯಂತ್ರ ನಿರ್ವಾಹಕರನ್ನು ಪ್ರತಿದಿನ 10-12 ತಾಸು ದುಡಿಸಿಕೊಂಡು ವೇತನ ನೀಡದೆ ಶೋಷಿಸಲಾಗುತ್ತದೆ. ಗ್ರಾಪಂಗಳಿಂದ ಒಬ್ಬರಿಗೆ ಮಾಸಿಕ ರು. 6276 ಪಡೆಯುವ ಮಧ್ಯವರ್ತಿ ಸಂಸ್ಥೆ ನಿರ್ವಾಹಕರಿಗೆ ನೀಡುವುದು ರು. 4243 ಮಾತ್ರ. ಆದ್ದರಿಂದ ಈ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಗ್ರಾಪಂಗಳ ಮೂಲಕ ನೇರವಾಗಿ ನೇಮಕ ಮಾಡಿಕೊಳ್ಳಬೇಕು ಮತ್ತು ಕೂಡಲೆ ಪಿಎಫ್ ಹಣ ಹಾಗೂ ವೇತನ ನೀಡಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಇಒ ಎಸ್.ಎಂ. ಖೇಡಗಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಾಪಂ ಲೆಕ್ಕಾಧಿಕಾರಿ ನಾಗರಾಜ್, ಲೊಕೇಶ್, ಗಣಕಯಂತ್ರ ನಿರ್ವಾಹಕರಾದ ಡಿ. ದಾದಾಸಾಬ್, ಪಿ. ಜ್ಯೋತಿ, ರಾಘವೇಂದ್ರ, ಶಿವಮೂರ್ತಿ, ಮೇಟಿ ರಮೇಶ್, ರವಿರಾಜ ಇತರರಿದ್ದರು.