ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

'ವಾಲ್ಮಿಕಿ ಯಾರು?' ಕೃತಿ ಮುಟ್ಟುಗೋಲಿಗೆ ಒತ್ತಾಯ

Lingaraj Badiger
Updated On : 19 Mar 2014, 12:26 pm

ಬಳ್ಳಾರಿ: ವಾಲ್ಮೀಕಿ ಬೇಡ ಸಮುದಾಯದವನಲ್ಲ, ಬ್ರಾಹ್ಮಣ ಎಂದು ಉಲ್ಲೇಖಿಸಿರುವ ಕೆ.ಎಸ್. ನಾರಾಯಣಾಚಾರ್ಯರ ವಾಲ್ಮೀಕಿ ಯಾರು ಎಂಬ ಕೃತಿಯನ್ನು ರಾಜ್ಯ ಸರ್ಕಾರ ಕೂಡಲೆ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದರು.
ಬ್ರಾಹ್ಮಣ ಮಹಿಳೆಯೊಬ್ಬಳು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಆಕೆಯ ಮಗುವನ್ನು ಹದ್ದು ಕೊಂಡೊಯ್ದು ಬೇರೆಡೆ ಬಿಟ್ಟಾಗ ಬೇಡ ಸಮುದಾಯದವರು ವಾಲ್ಮೀಕಿಯನ್ನು ಸಾಕಿ ಸಲುಹಿದ್ದಾರೆ ಎಂದು ಪುಸ್ತಕದಲ್ಲಿ ವಿಶ್ಲೇಷಿಸಿರುವ ಕೆ.ಎಸ್. ನಾರಾಯಣಾಚಾರ್ಯರು ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ. ವಾಲ್ಮೀಕಿ ಬೇಡ ಸಮುದಾಯದವರು ಎಂಬುದು ಈಗಾಗಲೆ ಜಗಜ್ಜಾಹೀರಾಗಿದೆ. ಇಂತಹ ವಿಷಯಗಳನ್ನು ಅರಗಿಸಿಕೊಳ್ಳದ ಜಾತಿವಾದಿಗಳು ಇಲ್ಲ ಸಲ್ಲದ ಕಟ್ಟು ಕಥೆಗಳನ್ನು ಕಟ್ಟಿ ಸಮಾಜವನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದು, ಹಿಂದೂ ಧರ್ಮದ ಮಹಾನ್ ಗ್ರಂಥಗಳಾದ ರಾಮಾಯಣ, ಮಹಾಭಾರತಗಳನ್ನು ತಾವೇ ರಚಿಸಿದ್ದೇವೆ ಎಂದು ಹೇಳಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಸಭಾದ ಜಿಲ್ಲಾಧ್ಯಕ್ಷ ಬಿ. ಜನಾರ್ದನ ನಾಯಕ ಆರೋಪಿಸಿದರು.
ನಾರಾಯಣಾಚಾರ್ಯರು ತಮ್ಮ ಹೇಳಿಕೆಯನ್ನು ಕೂಡಲೆ ಹಿಂಪಡೆಯಬೇಕು. ರಾಜ್ಯ ಸರ್ಕಾರವೂ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲವಾದಲ್ಲಿ ವಾಲ್ಮೀಕಿ ಸಮುದಾಯ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿಪತ್ರದಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಭಾದ ಉಪಾಧ್ಯಕ್ಷ ಕೃಷ್ಣ, ಮುಖಂಡರಾದ ತಿಮ್ಮಪ್ಪ, ಮಲ್ಲಯ್ಯ, ಬಿ. ಗೋಪಾಲ್, ಡಾ. ಬಿ. ಓಂಪ್ರಕಾಶ್ ನಾಯಕ, ಗೋವಿಂದಪ್ಪ, ದುರುಗಣ್ಣ, ಎನ್.ಕೆ. ಸುರೇಶ್, ಜಿ. ಕಮಲಾ ಮರಿಸ್ವಾಮಿ, ಟಿ. ಮಲ್ಲಿಕಾರ್ಜುನ, ಭಾಸ್ಕರ್, ಬಸವರಾಜ್, ಮೋಕಾ ಪಾಂಡು, ಕೆ. ಗವಿಸಿದ್ದಪ್ಪ, ಹದ್ದಿಗೇರಿ ರಾಮಣ್ಣ ಸೇರಿದಂತೆ ಸಮುದಾಯದ ಅನೇಕ ಮುಖಂಡರು, ಇತರರಿದ್ದರು.
ಕೃತಿ ರದ್ದತಿಗೆ ಆಗ್ರಹ
ಕೂಡ್ಲಿಗಿ: ಬರಹಗಾರ ಡಾ.ಕೆ.ಎಸ್. ನಾರಾಯಣಾಚಾರ್ಯ ಬರೆದ ವಾಲ್ಮೀಕಿ ಯಾರು ಕೃತಿಯಲ್ಲಿ ಮಹರ್ಷಿ ವಾಲ್ಮೀಕಿಯವರು ಬೇಡ ಸಮುದಾಯಕ್ಕೆ ಸೇರಿದವರಲ್ಲ, ಬ್ರಾಹ್ಮಣ ಜಾತಿಗೆ ಸೇರಿದವರೆಂಬ ಸಂಗತಿ ತುಂಬಿರುವ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆಗ್ರಹಿಸಿ ಪಟ್ಟಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿದರು.
ಮದಕರಿ ನಾಯಕ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಕೃತಿ ರಚನಾಕಾರರ ವಿರುದ್ಧ ಘೋಷಣೆ ಕೂಗಿದರು. ಕಚೇರಿ ಮುಂಭಾಗ ನಾಯಕ ಮಹಾಸಭಾ ಅಧ್ಯಕ್ಷ ಜಯರಾಂ ನಾಯಕ ಮಾತನಾಡಿ, ವಿಶ್ವದಾದ್ಯಂತ ವಾಲ್ಮೀಕಿ ಚರಿತ್ರೆ ತಿಳಿದಿದೆ. ಅವರೊಬ್ಬ ವಿಶ್ವಮಾನ್ಯ ಪೂಜ್ಯನೀಯರು. ಜನರ ನಂಬಿಕೆ, ಭಾವನೆಗಳಿಗೆ ಧಕ್ಕೆ ನೀಡುವಂಥ, ವಾಲ್ಮೀಕಿಯವರ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಬರೆಯುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಎನ್. ಮುದ್ದಪ್ಪ ಮಾತನಾಡಿ, ಪ್ರಾಚೀನ ಕಾಲದಿಂದಲು ಮಹರ್ಷಿ ವಾಲ್ಮೀಕಿ ಅವರು ಬೇಡ ಸಮುದಾಯದವರು ಎಂಬುದು ಜಗತ್ತಿಗೆ ಗೊತ್ತಿದೆ. ಅಂಥದ್ದರಲ್ಲಿ ಅವರು ಬ್ರಾಹ್ಮಣ ಸಮಾಜಕ್ಕೆ ಸೇರಿದವರು ಎಂಬುದನ್ನು ಕೃತಿ ರಚನೆ ಮಾಡಿರುವುದು ಬ್ರಾಹ್ಮಣರು ಮತ್ತು ವಾಲ್ಮೀಕಿ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವ ಕೃತಿಯಾಗಿದೆ. ನಾರಾಯಣಚಾರ್ಯರು ಕೂಡಲೆ ಕ್ಷಮೆಯಾಚಿಸಬೇಕು ಅಲ್ಲದೆ ಕೃತಿ ಮುಟ್ಟುಗೋಲಿಗೆ ಸರ್ಕಾರ ಕೂಡಲೆ ಮುಂದಾಗಬೇಕು. ಇಲ್ಲದೆ  ಹೋದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು. ನಂತರ ತಹಸೀಲ್ದಾರ್ ಎಲ್. ಕೃಷ್ಣಮೂರ್ತಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಪಿ. ಮಂಜುನಾಥ ನಾಯಕ, ಪಪಂ ಮಾಜಿ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಕಾಟೇರ್ ಹಾಲೇಶ್, ರಾಘವೇಂದ್ರ ಗುರಿಕಾರ, ಕೆ. ಬಾಲರಾಜ್, ಎಂ. ದುರುಗಪ್ಪ, ಮುರುಳಿಮೋಹನ, ಜಿ. ರಾಘವೇಂದ್ರ, ಕೊತ್ಲೇಶ, ಸೊಲ್ಲೇಶ, ಮಾದೇಶ್, ಜಿ. ಲಕ್ಷ್ಮೀದೇವಿ, ಎಂ. ರಾಘವೇಂದ್ರ, ಕೆ. ಈಶಪ್ಪ, ಜಿ. ಜಗದೀಶ್, ಎಂ. ಹನುಮಂತಪ್ಪ, ಎಂ. ಶಿವಮೂರ್ತಿ, ಟಿ. ರಮೇಶ್, ಎಚ್. ಪ್ರಸನ್ನ, ಎಚ್. ವೀರಭದ್ರಪ್ಪ, ವರುಣ್, ಡಿ. ಅನಿಲ, ನಾಗರಾಜ, ಜೋಗಪ್ಪ, ಎಂ. ಫಕ್ಕೀರಪ್ಪ ಇತರರಿದ್ದರು.

ವಾಲ್ಮೀಕಿ ಕೃತಿ ರದ್ದತಿಗೆ ಒತ್ತಾಯ
ಕಂಪ್ಲಿ: ರಾಮಾಯಣ ಕೃತಿ ರಚಿಸಿದ ವಾಲ್ಮೀಕಿ ಬೇಡರ ಸಮುದಾಯಕ್ಕೆ ಸೇರಿದವನಲ್ಲ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವನೆಂದು ಬಿಂಬಿಸಿರುವ ಡಾ.ಕೆ.ಎಸ್.ನಾರಾಯಣಾಚಾರ್ಯರ ವಾಲ್ಮೀಕಿ ಯಾರು? ಕೃತಿಯನ್ನು ಕೂಡಲೆ ರದ್ದುಗೊಳಿಸಿ, ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕಂಪ್ಲಿ ಪಿರ್ಕಾದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಬಿ.ನಾರಾಯಣಪ್ಪ ಸರ್ಕಾರಕ್ಕೆ ಒತ್ತಾಯಿಸಿದರು.
ಮಂಗಳವಾರ ಕಂಪ್ಲಿ ಪಿರ್ಕಾ ಮತ್ತು ನಗರ ಘಟಕ ಜಂಟಿಯಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು. ಮಹಾಸಭಾ ಕಾರ್ಯದರ್ಶಿ ನೀರಗಂಟಿ ವೀರೇಶ್ ಮಾತನಾಡಿ, ಸವರ್ಣೀಯರ ದೌರ್ಜನ್ಯ ತಡೆಯಬೇಕು. ಕೋಮುವಾದ ಸೃಷ್ಟಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಪಿರ್ಕಾ ಉಪಾಧ್ಯಕ್ಷ ಕರಿಯಪ್ಪ ನಾಯಕ, ಖಜಾಂಚಿ ಎ. ಹುಲುಗಪ್ಪ, ನಗರ ಘಟಕ ಅಧ್ಯಕ್ಷ ಬೂದಗುಂಪಿ ಅಂಬಣ್ಣ, ಕಾರ್ಯದರ್ಶಿ ಎನ್. ಶಿವಪ್ಪನಾಯಕ, ಮುಖಂಡರಾದ ಡಾ. ವೆಂಕಟೇಶ್ ಸಿ. ಭರಮಕ್ಕನವರ್, ದೇವರಮನಿ ಯಲ್ಲಪ್ಪ, ಬಿ. ಬಸವರಾಜ್, ಗ್ರಾಮ ಲೆಕ್ಕಾಧಿಕಾರಿ ಕೆ. ಗೋಪಾಲ್, ಜಿ. ಹೊನ್ನೂರುಸ್ವಾಮಿ, ನಾಯಕರ ಹನುಮಂತಪ್ಪ, ಹೊನ್ನಳ್ಳಿ ದ್ಯಾವಣ್ಣ, ಮೆಟ್ರಿ ಲೋಕೇಶ್, ಮಾವಿನಹಳ್ಳಿ ಹನುಮಂತಪ್ಪ, ಕಣಿವಿ ತಿಮ್ಮಲಾಪುರ ಶಿವಪ್ಪ, ಲಿಂಗಪ್ಪ, ರುದ್ರಪ್ಪ, ಬಿ. ಹುಲುಗಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement