ಪರಮೇಶ್ವರ ನಾಯ್ಕ ವಸೂಲಿ ಮಂತ್ರಿ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮಾ. 19
ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಈಗ ವಸೂಲಿ ಮಂತ್ರಿಗಳಾಗಿದ್ದು, ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದನ್ನು ಬಿಟ್ಟ ವಸೂಲಿ ದಂಧೆಗಿಳಿದಿರುವುದು ಜನಸಾಮಾನ್ಯರಿಗೂ ಗೊತ್ತಿದೆ. ಹೀಗಾಗಿ ಜನತೆ ಕಾಂಗ್ರೆಸ್ ನೀತಿಗೆ ಬೇಸತ್ತು ಹೋಗಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಎನ್.ಟಿ. ಬೊಮ್ಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕಾಂಗ್ರೆಸ್ನಲ್ಲಿ ಮೂರು ಗುಂಪುಗಳಾಗಿದ್ದು, ಕಾಂಗ್ರೆಸ್ನ ಆಂತರಿಕ ಭಿನ್ನಮತ ಬಿಜೆಪಿಗೆ ಈ ಬಾರಿ ವರವಾಗಲಿದೆ. ಆ ಮೂಲಕ ಅತ್ಯಧಿಕ ಮತಗಳಿಂದ ಶ್ರೀರಾಮುಲು ಗೆಲ್ಲುತ್ತಾರೆ ಎಂದರು.
ಶ್ರೀರಾಮುಲುಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದು ಸ್ವಾಗತಾರ್ಹ, ಕಾಂಗ್ರೆಸ್ನಲ್ಲಿ ಪ್ರಭಾವಿ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್, ಎಂ. ವೀರಪ್ಪ ಮೊಯ್ಲಿ, ಧರ್ಮಸಿಂಗ್ ಎಲ್ಲರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿನಗೆ ಟಿಕೆಟ್ ನೀಡುತ್ತೇವೆ, ನೀನು ಕ್ಷೇತ್ರದಲ್ಲಿ ಸಂಘಟನೆ ಮಾಡಲು ಹೋಗು ಎಂದು ಕಳುಹಿಸಿ ನಂತರ ಟಿಕೆಟ್ ನೀಡದೆ ಮೋಸ ಮಾಡಿದರು. ಹಾಗಾಗಿ ನಾನು ಕಾಂಗ್ರೆಸ್ನಲ್ಲಿ ನಂಬಿಕೆ ಕಳೆದುಕೊಂಡಿದ್ದು, ನನ್ನ ಮಕ್ಕಳಿಗೂ ಕಾಂಗ್ರೆಸ್ ಸೇರಬೇಡಿ ಎಂದು ಹೇಳುತ್ತೇನೆ ಎಂದು ರಾಜ್ಯ ಕಾಂಗ್ರೆಸ್ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೂಡ್ಲಿಗಿ ಶಾಸಕ ನಾಗೇಂದ್ರ ಅವರು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಎದುರಿಸುತ್ತಿರುವುದರಿಂದ ಈಗ ಕ್ಷೇತ್ರ ಅನಾಥವಾಗಿದೆ. ನಾವು ಇದೇ ತಾಲೂಕಿನವರು, ನನ್ನ ಕ್ಷೇತ್ರದ ಜನತೆಗೆ ಅನ್ಯಾಯವಾಗಿದೆ, ಹೀಗಾಗಿ ನಾನು ಪುನಃ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನನ್ನ ತಾಲೂಕಿನ ಜನತೆಗೆ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಬೊಮ್ಮಣ್ಣ ತಿಳಿಸಿದರು.
ಪಿಎ ದರ್ಬಾರ್ ಕೊನೆಗೊಳ್ಳಲಿ: ಕೂಡ್ಲಿಗಿ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರ ಪಿಎಗಳ ದರ್ಬಾರ್ನಿಂದ ಪಕ್ಷಗಳ ಮುಖಂಡರೆಲ್ಲ ಮೂಲೆ ಸೇರುವಂತಾಗಿದೆ ಎಂಬ ಜನತೆ ಆರೋಪ ಇದೆ ಎಂಬ ಪ್ರಶ್ನೆಗೆ ಬಿಜೆಪಿ ಹಿರಿಯ ಮುಖಂಡ ಗುಡೇಕೋಟೆ ರಾಘವೇಂದ್ರರಾವ್ ಪ್ರತಿಕ್ರಿಯಿಸಿ, ಜನತೆಯ ಅಭಿಪ್ರಾಯ ನಿಜವಾಗಿದ್ದು, ಪಿಎಗಳ ಆಡಳಿತದಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಮುಖಂಡರು, ಕಾರ್ಯಕರ್ತರು ಬೇಸತ್ತಿದ್ದಾರೆ. ಹೀಗಾಗಿ ಶಾಸಕ ಬಿ. ನಾಗೇಂದ್ರ ಕ್ಷೇತ್ರದಲ್ಲಿ ಪಿಎಗಳ ದರ್ಬಾರ್ ಕೈಬಿಟ್ಟು ಆಡಳಿತ ನಡೆಸಿದರೆ ಮಾತ್ರ ಕ್ಷೇತ್ರದಲ್ಲಿ ಜನತೆ ಬಿಜೆಪಿ ಬೆಂಬಲಿಸುತ್ತಾರೆ. ಇಲ್ಲದಿದ್ದರೆ ಅದರ ಫಲ ಉಣ್ಣಬೇಕಾಗುತ್ತದೆ ಎಂದರು.
ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಸಹ ಪಿಎ ಗಳ ಮೂಲಕ ಚುನಾವಣೆ ನಡೆಸಿದಲ್ಲಿ ಜನತೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಿಎಗಳ ದರ್ಬಾರ್ ಕೊನೆಗೊಂಡು ಆಯಾ ಭಾಗದ ಮುಖಂಡರಿಗೆ ಪ್ರಾತಿನಿಧ್ಯ ನೀಡಿದರೆ ಮಾತ್ರ ಬಿಜೆಪಿ ಕ್ಷೇತ್ರದಲ್ಲಿ ಮತ್ತಷ್ಟು ಪ್ರಬಲವಾಗಲು ಸಾಧ್ಯ ಎಂದು ಯುವ ಮುಖಂಡ ಕಾಂತ್ರಾಜ್ ತಿಳಿಸಿದರು.