'ವಾಲ್ಮೀಕಿ ಯಾರು?' ಕೃತಿ ಮುಟ್ಟುಗೋಲಿಗೆ ಆಗ್ರಹ
ಕನ್ನಡ ಪ್ರಭ ವಾರ್ತೆ, ಸಂಡೂರು, ಮಾ. 19
ಮಹರ್ಷಿ ವಾಲ್ಮೀಕಿ ಬೇಡರ ಜಾತಿಯವನಲ್ಲ, ಬದಲಾಗಿ ಬ್ರಾಹ್ಮಣ ಜಾತಿಯವನು ಎಂಬಂತೆ ಬಿಂಬಿಸಿರುವ ವಾಲ್ಮೀಕಿ ಯಾರು? ಎಂಬ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ಪುಸ್ತಕ ರಚಿಸಿರುವ ಕೆ.ಎಸ್. ನಾರಾಯಣಚಾರ್ಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದವರು ಪ್ರತಿಭಟನೆ ನಡೆಸಿದರು.
ಪಟ್ಟಣದ ವಾಲ್ಮೀಕಿ ಭವನದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕೆಇಬಿ ರಸ್ತೆ, ಪುರಸಭೆ, ಬಸ್ ನಿಲ್ದಾಣ, ವಿಜಯ ವೃತ್ತದ ಮೂಲಕ ಕೃತಿಕಾರನ ವಿರುದ್ಧ ಘೋಷಣೆ ಕೂಗಿದರು. ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯವನ್ನು ಆತನ ಭೌದ್ಧಿಕ ಸಂಪತನ್ನು ಅರಗಿಸಿಕೊಳ್ಳದ ಸವರ್ಣೀಯರು ಇತಿಹಾಸ ತಿರುಚುವ ಮೂಲಕ, ಜಾತಿ ನಿಂದನೆ ಮಾಡಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮತ್ತು ಸಮಾಜವನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿರುವ ಬುದ್ಧಿ ಜೀವಿಗಳನ್ನು ಜೈಲಿಗೆ ಕಳುಹಿಸಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಾಸಭಾದ ತಾಲೂಕಾಧ್ಯಕ್ಷ ಡಿ. ಕೃಷ್ಣಪ್ಪ, ಜಿಲ್ಲಾ ನಿರ್ದೇಶಕ ವಸಂತಕುಮಾರ್, ಜೆಬಿಟಿ ಬಸವರಾಜ್, ಮೇಕೆ ಈರಣ್ಣ, ಕೆ. ಮಲ್ಲಿಕಾರ್ಜುನ್, ನವಲೂಟಿ ಜಯಣ್ಣ, ಕಾರ್ಯದರ್ಶಿ ಟಿ. ಅಂಬರೀಷ್, ಸಮಾಜದ ಮುಖಂಡರಾದ ಟಿ.ಎನ್. ನಾಗರಾಜ್, ನಾಗೇನಹಳ್ಳಿ ಮಂಜುನಾಥ್, ಚೋರನೂರು ಅಡಿವೆಪ್ಪ, ಗಂಡಿಮಾರಪ್ಪ, ಸಿ.ಎಂ. ಶಿಗ್ಗಾವಿ, ತುಮಟಿ ನಾಗರಾಜ್, ವಕೀಲ ಸತ್ಯನಾರಾಯಣ, ಆಟೋ ತಿಪ್ಪೇಸ್ವಾಮಿ, ಶಾಮೀಯಾನ ಅಂಜಿನಿ, ಚಂದ್ರು, ಪಿಆರ್ಒ ನಾರಾಯಣ್, ಈರಣ್ಣ, ಪುರಸಭೆ ಸದಸ್ಯ ಡಿ. ರಾಘವೇಂದ್ರ, ಪ್ರಶಾಂತ್, ನರಸಾಪುರ ಶ್ರೀಕಾಂತ್, ವಿಜಿ, ಭರಮಣ್ಣ ಇತರರು ಇದ್ದರು.
--
ಕುಸ್ತಿ: ಹರಪ್ಪನಹಳ್ಳಿ ಸುರೇಶ, ಎಂ.ಎಂ. ಹಳ್ಳಿ ಸೈಫುಲ್ ವಿಜೇತರು
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಐತಿಹಾಸಿಕ ಬಂಡೆರಂಗನಾಥ ಸ್ವಾಮಿ ರಥೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಬಯಲು ಕುಸ್ತಿ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ಹಂಪಿ ಕಿಶೋರ ಪ್ರಶಸ್ತಿ ವಿಜೇತ ಹರಪ್ಪನಹಳ್ಳಿ ಸುರೇಶ ಹಾಗೂ ಮರಿಯಮ್ಮನಹಳ್ಳಿಯ ಸೈಫುಲ್ ಜಂಟಿ ವಿಜೇತರಾದರು.
ಗ್ರಾಮದ ಎಪಿಎಂಸಿ ಆವಣರದಲ್ಲಿ ನೂತನವಾಗಿ ನಿರ್ಮಿಸಿರುವ ಕುಸ್ತಿ ಅಖಾಡದಲ್ಲಿ ನೆರೆದಿದ್ದ ಸಾವಿರಾರು ಕುಸ್ತಿ ಪ್ರೇಮಿಗಳನ್ನು ಕೊನೆ ಕ್ಷಣದವರೆಗೂ ವೀಕ್ಷಿಸುವಂತೆ ಮಾಡಿದ್ದ ಸುರೇಶ- ಸೈಫುಲ್ ನಡುವಿನ ಜಿದ್ದಾಜಿದ್ದಿ ಕಾಳಗ ಕೊನೆಯಲ್ಲಿ ಡ್ರಾನಲ್ಲಿ ಅಂತ್ಯಗೊಂಡಿತು. ಕುಸ್ತಿ ಸಂಘಟಿಸಿದ್ದ ಶ್ರೀ ಹನುಮಾನ್ ಕುಸ್ತಿ ಮಂಡಳಿಯವರು ಇಬ್ಬರನ್ನು ಜಂಟಿ ವಿಜೇತರೆಂದು ಘೋಷಿಸಿ, ನಗದು, ಶಿಲ್ಡ್ನ್ನು ನೀಡಿ ಗೌರವಿಸಿದರು.
ಇರ್ವರು ಪೈಲ್ವಾನರ ಮಧ್ಯೆ ಒಂದು ಗಂಟೆವರೆಗೂ ಭಾರೀ ಜಿದ್ದಾಜಿದ್ದಿ ಹೋರಾಟವೆ ಜರುಗಿತು. ಇಬ್ಬರು ಸಮಬಲ ಪಟ್ಟುಗಳನ್ನು ಹಾಕಿ ಮೆಲುಗೈ ಸಾಧಿಸುತ್ತಿದ್ದಂತೆಯೇ ಪೈಲ್ವಾನರನ್ನು ಕಾಳಗಕ್ಕೆ ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬಂತು. ಜಯಕ್ಕಾಗಿ ಅಂತಿಮ ಕ್ಷಣದವರೆಗೂ ಸೆಣಸಾಡಿ ಆ ಮೂಲಕ ನೆರೆದಿದ್ದ ಕುಸ್ತಿ ಪ್ರೇಮಿಗಳಿಗೆ ರಸದೂಟ ನೀಡಿದರು. ಅಂತಿಮವಾಗಿ ಸಂಘಟಕರು ಡ್ರಾಗೆ ಸಮ್ಮಿತಿಸಿ, ಜಂಟಿ ವಿಜೇತರೆಂದು ಘೋಷಿಸಿದರು.
ಇದಕ್ಕೂ ಮುನ್ನ ಜರುಗಿದ ಪರೀಶಿ ಪೈಕಿ ಕುಸ್ತಿಯಲ್ಲಿ ಹರಪ್ಪನಹಳ್ಳಿಯ ಅಸ್ಲಾಂ ಹಾಗೂ ಮರಿಯಮ್ಮನಹಳ್ಳಿಯ ಹನುಮಂತ ಮಧ್ಯೆ ಜರುಗಿದ ಕುಸ್ತಿಯಲ್ಲಿ ಉತ್ತಮ ಹೋರಾಟ ನಡೆಸಿದ ಹನುಮಂತ ಗಾಯಾಳು ಆಗಿದ್ದರಿಂದ ಕಣದಿಂದ ನಿವೃತ್ತಿ ಹೊಂದಿ ಅಸ್ಲಾಂನನ್ನು ವಿಜೇತ ಎಂದು ಘೋಷಿಸಲಾಯಿತು. ಗಾಯಾಳು ಹನುಮಂತನಿಗೆ ಸಂಘಟಕರು ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಿದರು.
ಜತೆ ಪೈಕಿ ಕುಸ್ತಿಯಲ್ಲಿ ದಾವಣಗೆರೆ ಕ್ರೀಡಾ ಹಾಸ್ಟೆಲ್ನ ಕೆಂಚಪ್ಪ ಅರಸಿಕೇರಿಯ ಅಂಜಿನಪ್ಪ ಅವರನ್ನು ಚಿತ್ ಮಾಡಿ ಬೆಳ್ಳಿ ಕಡಗ, ನಗದು ಬಹುಮಾನ ಗಿಟ್ಟಿಸಿಕೊಂಡರು. ಹುಲಿಗಿಯ ಸುರೇಶ, ರಾಮನಗರದ ಸೋಮು, ನಾಣಿಕೇರಿ ಅಂಜಿನಿ ಸೇರಿದಂತೆ ಹಲವು ಪೈಲ್ವಾನರು ತಮ್ಮ ಎದುರಾಳಿಗಳನ್ನು ಸೋಲಿಸಿ ವಿಜಯದ ನಗೆ ಬೀರಿದರು.
ಹಿರಿಯರಾದ ಅಕ್ಕಿ ಕೊಟ್ರಪ್ಪ ಕುಸ್ತಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ಶಾಸಕ ಎಸ್. ಭೀಮಾನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಕುರಿ ಶಿವಮೂರ್ತಿ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಜೆಡಿಎಸ್ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಎಚ್.ಎಂ. ಚೋಳರಾಜ, ಎಪಿಎಂಸಿ ಸದಸ್ಯ ವಿ. ಕೃಷ್ಣ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಕುಸ್ತಿ ವೀಕ್ಷಿಸಿದರು. ಎಂ.ಪಿ. ಪರಮೇಶಿ, ಕಡ್ಡಿ ಚನ್ನಪ್ಪ, ಗೌರಜ್ಜನವರ ಗಿರಿ, ಮಲ್ಲಿಕಾರ್ಜುನ, ಬಣಕಾರ ಕೊಟ್ರೇಶ್, ಮೊರಗೇರಿ ವಿಶ್ವನಾಥ ಇತರರು ಭಾಗವಹಿಸಿದ್ದರು. ಹುಳ್ಳಿ ಪ್ರಕಾಶ, ಖಾದರ್ಸಾಬ್, ಎಚ್. ನೀಲಪ್ಪ ಕುಸ್ತಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಎಚ್.ಬಿ. ಗಂಗಾಧರಗೌಡ ನಿರೂಪಿಸಿದರು.