ಇಲ್ಲಿದೆ ಭೂತ ಬಂಗ್ಲೆಯಂಥ ರೈತ ಭವನ
ಹಗರಿಬೊಮ್ಮನಹಳ್ಳಿ: ದಶಕಗಳಿಂದ ಸುಣ್ಣ ಬಣ್ಣ ಕಾಣದ ಕಟ್ಟಡ, ಶೌಚಾಲಯದಿಂದ ಹೊರಬರುವ ದುರ್ನಾತ, ಈಗಲೋ, ಆಗಲೋ ಕಳಚಿ ಬೀಳುವಂತ ಸ್ಥಿತಿಯಲ್ಲಿರುವ ಮೇಲ್ಚಾವಣಿ, ಸದಾ ಮುಚ್ಚಿರುವ ಮುಖ್ಯಧ್ವಾರ, ಕಾಲಿಡಲು ಹೇಸಿಗೆ ಪಡುವಷ್ಟು ಹೊಲಸು, ಗಲೀಜಿನಿಂದ ತುಂಬಿರುವ ಹೊರ ಆವರಣ...
ಇದು ಏನು ಹೀಗೆಲ್ಲ ಹೇಳುತ್ತಿದ್ದಾರೆ ಎಂದು ಪ್ರಶ್ನೆ ಹಾಕಿಕೊಳ್ಳಬೇಡಿ. ಪ್ರಮುಖ ವಹಿವಾಟು ನಡೆಸುವ ರಾಜ್ಯದ ನೂರು ಪ್ರಮುಖ ಎಪಿಎಂಸಿಗಳಲ್ಲಿ ಒಂದಾದ ಹಗರಿಬೊಮ್ಮನಹಳ್ಳಿ ಎಪಿಎಂಸಿ ಆವರಣದಲ್ಲಿನ ರೈತ ಭವನದ ಇಂದಿನ ದುಸ್ಥಿತಿ.
ಸೂಕ್ತ ನಿರ್ವಹಣೆ ಇಲ್ಲದಿರುವ ಜತೆಗೆ ಆಡಳಿತಗಾರರ ನಿರ್ಲಕ್ಷ್ಯದಿಂದಾಗಿ ಇಂದು ರೈತ ಭವನ ಹಾಳು ಕೊಂಪೆಗಿಂತಲೂ ಕಡೆಯಾಗಿ ಭೂತ ಬಂಗ್ಲೆಯಾಗಿ ಮಾರ್ಪಟ್ಟಿದೆ. ತಾಲೂಕು ಸೇರಿದಂತೆ ಈ ಎಪಿಎಂಸಿಗೆ ಬರುವ ರೈತ ಪರಿವಾರದ ಕಲ್ಯಾಣಕ್ಕಾಗಿ ಸರ್ಕಾರ ಕಟ್ಟಿಸಿರುವ ಈ ಭವನದ ಇಂದಿನ ಈ ದುಸ್ಥಿತಿ ಇಲ್ಲಿನ ಎಪಿಎಂಸಿ ಆಡಳಿತಗಾರರ ವೈಫಲ್ಯ ಎತ್ತಿ ತೋರಿಸುತ್ತದೆ. ರೈತ ಭವನದ ನಿರ್ವಹಣೆಗೆ ಸರ್ಕಾರದಿಂದ ಇಲ್ಲವೆ ಎಪಿಎಂಸಿಯಿಂದ ಪ್ರತಿವರ್ಷ ನಿರ್ವಹಣಾ ಅನುದಾನ ಬರುವುದಿಲ್ಲವೆ? ಬಂದರೂ ನಿರ್ವಹಣಾ ವೆಚ್ಚ ಏನಾಯಿತು ಎಂಬ ರೈತ ಸಮುದಾಯದ ಪ್ರಶ್ನೆಗೆ ಎಪಿಎಂಸಿ ಆಡಳಿತಗಾರದ್ದು ಮೌನವೇ ಉತ್ತರೆ.
ತ್ಯಾಜ್ಯಗಳಿಂದ ಸ್ವಾಗತ: ರೈತ ಭವನವಿದೆ ಎಂದುಕೊಂಡು ನೀವೆನಾದರೂ ಈ ಭವನದತ್ತ ಹೆಜ್ಜೆ ಹಾಕಿದರೆ ಇಲ್ಲಿ ನಿಮಗೆ ಸಿಗುವುದು ಖಾಲಿ ಬಿದ್ದ ಗುಟ್ಕಾ ಪ್ಯಾಕೇಟ್, ಸೇದಿ ಎಸೆದ ಸಿಗರೇಟು, ಬ್ರಾಂದಿ, ವಿಸ್ಕಿ ಟೆಟ್ರಾಪ್ಯಾಕ್‌ಗಳು, ಬಳಸಿ ಎಲ್ಲೆಂದರಲ್ಲಿ ಬಿಸಾಡಿರುವ ವಿವಿಧ ತ್ಯಾಜ್ಯಗಳು, ಧೂಳಿನ ಕಣದಂತಿರುವ ಕಟ್ಟಡಗಳು, ದಶಕಗಳಿಂದ ಸ್ವಚ್ಛವಾಗದ ಪರಿಸರದಿಂದ ಬರುವ ದುರ್ನಾತ ನಿಮ್ಮನ್ನು ಸ್ವಾಗತಿಸುತ್ತವೆ. ರೈತ ಸಂಬಂಧಿ ಚಟುವಟಿಕೆ ಹೊರತುಪಡಿಸಿ ಬೇರೆಲ್ಲ ಚಟುವಟಿಕೆಗೆ ಇದು ತಾಣ ಎಂದರೂ ಅಡ್ಡಿಯಿಲ್ಲ.
ಬಳಕೆಯಾಗದ ಸಭಾಂಗಣ: ಭವನದಲ್ಲಿರುವ ಸಭಾಂಗಣ ರೈತರ ಬಳಕೆಗೆ ಇದುವರೆಗೆ ಸಿಕ್ಕಿಲ್ಲ. ಉದ್ಘಾಟನೆ ನಂತರ ಸ್ವಲ್ಪ ದಿನದವರೆಗೂ ಈ ಸಭಾಂಗಣದಲ್ಲಿ ಉಪಾಹಾರ ಗೃಹ ನಡೆದಿದ್ದು ಬಿಟ್ಟರೆ ಅಲ್ಲಿಂದ ಇಲ್ಲಿಯ ತನಕ ಇದು ಎಪಿಎಂಸಿಯ ಹಳೆ ವಸ್ತುಗಳನ್ನು ಇಡುವ ಕೋಣೆಯಾಗಿ ಬಳಕೆಯಾಗುತ್ತಿದೆ.
ಇನ್ನು ಎಪಿಎಂಸಿಗೆ ಬರುವ ರೈತರು ಬೆಳೆ ಮಾರಾಟವಾಗುವವರೆಗೆ ವಿಶ್ರಾಂತಿ ಪಡೆಯಲು ಭವನದಲ್ಲಿ ಐದಾರು ರೂಮ್‌ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ರೂಮ್‌ಗಳಲ್ಲಿ ರೈತರು ವಿಶ್ರಾಂತಿ ಪಡೆದುಕೊಂಡಿದ್ದು ಬಲು ಅಪರೂಪ. ಬದಲಿಗೆ ರೈತರ ಹೆಸರಿನಲ್ಲಿ ಎಪಿಎಂಸಿಗೆ ಆಯ್ಕೆಯಾದ ನಿರ್ದೇಶಕರು ಇಲ್ಲವೆ ಅವರ ಹಿಂಬಾಲಕರು ಹಾಗೂ ಎಪಿಎಂಸಿ ಸಿಬ್ಬಂದಿ ಇಲ್ಲಿ ವಾಸ್ತವ್ಯ ಹೂಡಿದ್ದೆ ಹೆಚ್ಚು. ಇನ್ನು ಆ ರೂಮ್‌ಗಳ ವ್ಯವಸ್ಥೆ ಆ ದೇವರಿಗೆ ಪ್ರೀತಿ.
ಖ್ಯಾತಿ ಗಳಿಸಿದ್ದ ಎಪಿಎಂಸಿ: ಸ್ವಾತಂತ್ರ್ಯ ಯೋಧರಾದ ಹಾಲ್ದಾಳ್ ಕೊಟ್ರಪ್ಪ, ತಿಗರಿ ಪಾಲಕ್ಷಪ್ಪ ಅವರಂತ ಹಿರಿಯರು ಬಿಸಿಲೂರಿನ ಎಪಿಎಂಸಿಯನ್ನು ಸಾಕಷ್ಟು ಸದೃಢವಾಗಿ ಬೆಳೆಸುವ ಮೂಲಕ ಈ ಭಾಗದ ರೈತರಿಗೆ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕಲ್ಪಿಸಿಕೊಡುವ ಕಾರ್ಯ ಮಾಡಿದ್ದರು. ಆ ಮೂಲಕ ರೈತ ಸಮುದಾಯದಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ಹಾಲ್ದಾಳ್ ಕೊಟ್ರಪ್ಪ, ತಿಗರಿ ಪಾಲಾಕ್ಷಪ್ಪ ಎಪಿಎಂಸಿಯ ಆಡಳಿತ ಚುಕ್ಕಾಣಿ ಹಿಡಿದ ಸಮಯದಲ್ಲಿ ಈ ಎಪಿಎಂಸಿಯ ಖ್ಯಾತಿ ನಾಡಿಗೆಲ್ಲ ಪರಿಚಯವಾಗಿತ್ತು. ಸುಮಾರು ರು. 1.5 ಕೋಟಿ ವಾರ್ಷಿಕ ಮಾರಾಟ ಶುಲ್ಕ ಸೇರಿ ಇತರೆ ತೆರಿಗೆಯನ್ನು ಎಪಿಎಂಸಿ ಸಂಗ್ರಹಿಸುತ್ತದೆ. ಕೋಟಿ ತೆರಿಗೆ ಸಂಗ್ರಹಿಸುವ ಎಪಿಎಂಸಿಗಳಲ್ಲಿ ಇದು ಒಂದು. ಆದರೆ ರೈತರ ಅನುಕೂಲಕ್ಕಾಗಿಯೇ ಇರುವ ರೈತ ಭವನದ ಕಡೆಗೆ ಇಲ್ಲಿನ ಆಡಳಿತಗಾರರು ಕಣ್ಣೆತ್ತಿ ಕೂಡ ನೋಡುತ್ತಿಲ್ಲ. ಹೀಗಾಗಿ ರೈತ ಭವನ ಭೂತ ಬಂಗ್ಲೆಯಂತಾಗಿದೆ.
-- ಹುಳ್ಳಿ ಪ್ರಕಾಶ