ಉಮಾ, ಗೌಸಿಯಾ ಅಧ್ಯಕ್ಷೆ, ಉಪಾಧ್ಯಕ್ಷೆ
ಹೊಸಪೇಟೆ: ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಣ್ಣಿ ಉಮಾದೇವಿ ಮತ್ತು ಉಪಾಧ್ಯಕ್ಷರಾಗಿ ಗೌಸಿಯಾ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹೊಸಪೇಟೆ ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಬಿತ್ತು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ನಾಮಪತ್ರ ಸಲ್ಲಿಸಬೇಕಾಗಿತ್ತು. ನಾಮಪತ್ರ ಸಲ್ಲಿಕೆ ಅವಧಿ ಒಳಗಾಗಿ ಅಧ್ಯಕ್ಷರ ಸ್ಥಾನಕ್ಕೆ 34ನೇ ವಾರ್ಡ್‌ನ ಕಣ್ಣಿ ಉಮಾದೇವಿ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ 17ನೇ ವಾರ್ಡ್‌ನ ಗೌಸಿಯಾ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ. ಸುನೀಲ್‌ಕುಮಾರ್ ಘೋಷಿಸಿದರು.
ನಗರಸಭೆಯು ಒಟ್ಟು 35 ಸ್ಥಾನಗಳನ್ನು ಒಳಗೊಂಡಿದ್ದು, 20 ಸದಸ್ಯರು ಕಾಂಗ್ರೇಸ್‌ನಿಂದ, ಇಬ್ಬರು ಬಿಜೆಪಿಯಿಂದ, ಓರ್ವ ಜೆಡಿಎಸ್‌ನಿಂದ ಮತ್ತು 12 ಸದಸ್ಯರು ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಎಲ್ಲ ಸದಸ್ಯರು ಭಾಗವಹಿಸಿ ಇವರಿಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಆಯ್ಕೆ ವಿಚಾರ ಹೊರ ಬೀಳುತ್ತಿದ್ದಂತೆಯೆ ನಗರಸಭೆ ಕಚೇರಿ ಹೊರಗೆ ನೆರೆದಿದ್ದ ಅಭಿಮಾನಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ, ಶಾಸಕ ಎಂ.ಪಿ. ರವೀಂದ್ರ, ಮುಖಂಡರಾದ ದೀಪಕ್‌ಕುಮಾರ್ ಸಿಂಗ್, ಅಬ್ದುಲ್ ವಹಾಬ್, ಗುಜ್ಜಲ್ ನಾಗರಾಜ್, ಎಚ್.ಜಿ. ಗುರುದತ್ತ, ಎಚ್. ಶಾದಾಬ್ ವಹಾಬ್, ಗುಜ್ಜಲ್ ರಾಘವೇಂದ್ರ ಹಾಗೂ ಬ್ಲಾಕ್ ಸಮಿತಿ ಅಧ್ಯಕ್ಷರಾದ ಡಿ. ವೆಂಕಟರಮಣ, ತಾರಿಹಳ್ಳಿ ಶಿವಮೂರ್ತಿ ಸೇರಿದಂತೆ ಮುಖಂಡರು ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿದರು. ಶತಮಾನೋತ್ಸವ ಸಂಭ್ರಮದಲ್ಲಿರುವ ನಗರಸಭೆ ನೂತನ ಕಟ್ಟಡ ಕಚೇರಿಯಲ್ಲಿ ಪ್ರಥಮವಾಗಿ ಅಧ್ಯಕ್ಷರಾಗಿ ಕಣ್ಣಿ ಉಮಾದೇವಿ ಹಾಗೂ ಉಪಾಧ್ಯಕ್ಷೆ ಗೌಸಿಯಾ ಅಧಿಕಾರದ ಗದ್ದುಗೆ ಏರಿದ್ದು ವಿಶೇಷ.