ಎಡದಂಡೆಗೆ ಏ. 5ರ ವರೆಗೆ ನೀರು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 28
ರೈತರ ಮನವಿಯಂತೆ ಎಲ್ಎಲ್ ಕಾಲುವೆಗೆ ಮಾ. 31ರಂದು ತುಂಗಭದ್ರಾ ಬೋರ್ಡ್ ಅಧಿಕಾರಿಗಳು ನೀರು ಹರಿಸಿದ್ದಾರೆ. ಏ. 5ರ ವರೆಗೆ ನೀರು ಬಿಡುವಂತೆ ಕೋರಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ ನಿರ್ಮಿಸುತ್ತಿರುವ ಸಂದರ್ಭದಲ್ಲಿ ವರ್ಷದಲ್ಲಿ ಎರಡು ಬೆಳೆಗಳಿಗೆ ನೀರು ಕೊಡುವ ಭರವಸೆ ನೀಡಲಾಗಿತ್ತು. ಆದರೆ ಪ್ರತಿ ವರ್ಷವೂ ಎರಡನೇ ಬೆಳೆ ಸಂದರ್ಭದಲ್ಲಿ ನೀರಿಗಾಗಿ ರೈತರು ಹೋರಾಟ ಮಾಡಬೇಕಾಗಿದೆ. ಅಧಿಕಾರಿಗಳು ಹಾಗೂ ಸಚಿವರ ಹತ್ತಿರ ಸುತ್ತಾಡಬೇಕಾಗುತ್ತದೆ. ಪ್ರತಿ ವರ್ಷವೂ ರೈತರು ಇಂತಹ ಸಮಸ್ಯೆ ಎದುರಿಸುವಂತಾಗಿದೆ ಎಂದರು.
ನಿಟ್ಟುಸಿರು ಬಿಟ್ಟ ರೈತರು: ತುಂಗಭದ್ರಾ ಜಲಾಶಯದ ಸಲಹಾ ಸಮಿತಿ ಸಭೆಯಲ್ಲಿ ಮಾ. 10ರ ವರೆಗೆ ಎಲ್ಎಲ್ ಕಾಲುವೆಗೆ ನೀರು ಬಿಡಲು ನಿರ್ಧರಿಸಲಾಗಿತ್ತು. ಅವಧಿ ವಿಸ್ತರಿಸುವಂತೆ ರೈತರು ಮನವಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ನೀರಾವರಿ ಸಚಿವರೊಂದಿಗೆ ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಾ. 31ರ ವರೆಗೆ ನೀರು ಬಿಡಲಾಗುತ್ತಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ. ಇದರಿಂದಾಗಿ ಶೇ. 60ರಷ್ಟು ಬೆಳೆ ರೈತರಿಗೆ ಬಂದಂತಾಗುತ್ತದೆ. ಏ. 10ರ ವರೆಗೆ ನೀರಿನ ಅಗತ್ಯವಿದೆ, ಆದರೆ ಏ. 5ರ ವರೆಗೆ ನೀರು ಬಿಡುವುದರಿಂದ ಶೇ. 90ರಷ್ಟು ಬೆಳೆ ಬರುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಅಧಿಕಾರಿಗಳ ಸಮ್ಮತಿ: ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 7.58 ಟಿಎಂಸಿ ನೀರು ಇದ್ದು, ಅದರಲ್ಲಿ 1.5 ಟಿಎಂಸಿ ನೀರು ರಾಯಬಸವ ಕಾಲುವೆಗೆ ಬಿಡಬೇಕು. 2 ಟಿಎಂಸಿ ನೀರು ಕುಡಿಯುವುದಕ್ಕೆ, 0.50 ಆಂಧ್ರಕ್ಕೆ ಕುಡಿಯುವ ನೀರು, 0.50 ತುಂಗಭದ್ರಾ ನದಿಗೆ ನೀರು, 0.8 ಟಿಎಂಸಿ ಆವಿಯಾಗುವ ನೀರು, 3 ಟಿಎಂಸಿ ನೀರು ರಾಯಚೂರು ಕಾಲುವೆಗೆ ಹೋಗುತ್ತದೆ. ಅದರಲ್ಲಿ ಕೆಲವು ಪ್ರಮಾಣದ ನೀರು ಉಳಿಸಿಕೊಂಡು ಏ. 5ರ ವರೆಗೆ ಕಾಲುವೆಯಲ್ಲಿ ಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಅವರು ಸಮ್ಮತಿ ಸೂಚಿಸಿದ್ದಾರೆ. ಅದರಿಂದಾಗಿ ಬತ್ತ ಬೆಳೆಗಾರ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಆಲಿಕಲ್ಲು ಮಳೆಗೆ ರೈತರ ಬೆಳೆಹಾನಿಯಾಗಿದ್ದು, ಈ ಕುರಿತಾಗಿ ಕೃಷಿ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ, ರೈತರಿಗೆ ಅಗತ್ಯ ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡಪರ ಹೋರಾಟಗಾರ ಕುಂದಾಪುರ ನಾಗರಾಜ್, ರೈತರಾದ ಶ್ರೀಧರಗೌಡ, ಗುತ್ತಿಗನೂರು ತಿಪ್ಪೇಸ್ವಾಮಿ, ಸಾಗರ್ ಪಾಟೀಲ್, ಬೈರಾಪುರ ಸಿದ್ದಲಿಂಗನಗೌಡ, ರಂಗನಗೌಡ, ದರೂರು ವಿರೂಪಾಕ್ಷಿ, ವೀರೇಶ್ ನಾಯಕ್, ಉಮೇಶ್ ನಾಯಕ, ದುರ್ಗಣ್ಣ ನಾಯಕ್ ಇತರರು ಇದ್ದರು.