ಕಾಂಗ್ರೆಸ್‌ಗೆ ಆರ್‌ಜೆಡಿ ಬೆಂಬಲ
ಬಳ್ಳಾರಿ: ಏಪ್ರಿಲ್ 17ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾದಳ ಕರ್ನಾಟಕ ಪಕ್ಷವು ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ ಎಂದು ಜಿಲ್ಲಾಧ್ಯಕ್ಷ ಪಿ. ಬಂಡೇಗೌಡ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಜೆಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಈಗಾಗಲೇ ಸೋನಿಯಾಗಾಂಧಿಯವರೊಂದಿಗೆ ಮಾತನಾಡಿದ್ದು, ಬಿಹಾರದಲ್ಲಿ ಒಂದಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಲಾಗುತ್ತಿದೆ. ಆದ್ದರಿಂದ ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನದಂತೆ ರಾಜ್ಯಾಧ್ಯಕ್ಷ ಯಾಕೂಬ್ ಸೂಚನೆಯ ಮೇರೆಗೆ ಜಿಲ್ಲೆಯಲ್ಲೂ ಕಾಂಗ್ರೆಸ್ ಪಕ್ಷ ಬೆಂಬಲಿಸಲು ಮುಂದಾಗಿದ್ದೇವೆ. ಅಲ್ಲದೇ, ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಅವರೊಂದಿಗೂ ಈಗಾಗಲೇ ಮಾತನಾಡಲಾಗಿದೆ ಎಂದರು.
ಬಿಜೆಪಿಯವರು ಚಾಯ್ ಪೇ ಚರ್ಚಾ, ನರೇಂದ್ರ ಮೋದಿ ಅಲೆ ಇದೆ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದು, ಅದ್ಯಾವುದೂ ಇಲ್ಲ. ಇದೆಲ್ಲ ಕೇವಲ ಕಲ್ಪಿತವಾಗಿದೆ. ಸಾಕಷ್ಟು ಅಭಿವೃದ್ಧಿಯಾಗಿದೆ ಎಂದೆಲ್ಲ ಬಿಜೆಪಿಯವರು ಹೇಳಿಕೊಳ್ಳುತ್ತಿರುವ ಗುಜರಾತ್‌ನಲ್ಲಿ ಕೈಗಾರೀಕರಣ ನೆಪದಲ್ಲಿ ಕೃಷಿ ಉತ್ಪಾದನೆಯಲ್ಲಿ ಕಡಿಮೆಯಾಗಿದ್ದು, ರೈತರ ಆತ್ಮಹತ್ಯೆಗಳು ಹೆಚ್ಚಾಗಿದೆ ಎಂದರು.
ತುಂಗಭದ್ರಾ ಬಲದಂಡೆಯ ಎಲ್‌ಎಲ್‌ಸಿ ಕಾಲುವೆಗೆ ನೀರು ಬಿಡುವ ದಿನಾಂಕವನ್ನು ಇನ್ನಷ್ಟು ದಿನಗಳು ವಿಸ್ತರಿಸಬೇಕಿದೆ. ಈಗಾಗಲೇ ಮಾರ್ಚ್ 31ರ ವರೆಗೆ ನೀರು ಬಿಡಲಾಗಿದ್ದು, ಇದನ್ನು ಏ. 20ರ ವರೆಗೆ ವಿಸ್ತರಿಸಬೇಕಿದೆ. ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಎಕರೆಗಳಲ್ಲಿ ನಾಟಿ ಮಾಡಿರುವ ಭತ್ತಕ್ಕೆ ಸಮರ್ಪಕ ನೀರಿಲ್ಲದೆ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸಬೇಕಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಾಲುವೆಗೆ ಏ. 20ರ ವರೆಗೆ ನೀರು ಹರಿಸಬೇಕೆಂದು ಮನವಿ ಮಾಡಿದ್ದಾರೆ.
ಕಪ್ಪಗಲ್ ರಸೂಲ್‌ಸಾಬ್, ಡಿ. ಮಾಬುಸಾಬ್, ಮಹಮ್ಮದ್ ಗೌಸ್ ಇತರರಿದ್ದರು.