ಕರಡಿ ದಾಳಿಗೆ ರೈತ ಬಲಿ
ಜೋಯಿಡಾ: ಹೊಲದ ಕೆಲಸಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿ ತಲೆ ಹಾಗೂ ಬಲ ಮೊಣಕಾಲಿನ ಭಾಗವನ್ನು ಕಚ್ಚಿ ತುಂಡರಿಸಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗಾಯಾಳುವನ್ನು ಜೋಯಿಡಾ ಆರೋಗ್ಯ ಕೇಂದ್ರಕ್ಕೆ ಕರೆತರುವಷ್ಟರಲ್ಲಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದ ದೂದಮಾಳಾ ಗ್ರಾಮದ ವಿಷ್ಣು ಬುದೊ ವೇಳಿಪ್ ಕರಡಿ ದಾಳಿಗೆ ಬಲಿಯಾದ ರೈತ. ಕರಡಿ ದಾಳಿ ಮಾಡುವಾಗ ಈತನಿಂದ ತುಸು ದೂರದಲ್ಲಿದ್ದ ಮಾದೇವ ವೇಳಿಪ್ ಧಾವಿಸಿ ಬರುವಷ್ಟರಲ್ಲಿ ತೀವ್ರವಾಗಿ ಗಾಯಗೊಳಿಸಿ ಓಡಿ ಹೋಗಿತ್ತು. ಅಪಾರ ನೋವನ್ನು ಸಹಿಸಿಕೊಳ್ಳುತ್ತಲೇ ವಿಷ್ಣು ವೇಳಿಪ್, ತಾನು ಬದುಕಿ ಬರುವುದಾಗಿ ಹೆಂಡತಿ, ಮಕ್ಕಳಿಗೆ ಹೇಳಿದ್ದ. ಕುಂಬಾರವಾಡಾ ವಲಯ ಅರಣ್ಯಾಧಿಕಾರಿ ಎಂ.ಎಸ್. ಕಳ್ಳಿಮಠ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳುವನ್ನು ಜೋಯಿಡಾ ಆರೋಗ್ಯ ಕೇಂದ್ರಕ್ಕೆ ಸಾಗಿಸಲೆತ್ನಿಸಿದರು. ಆದರೆ, ದಾರಿ ಮಧ್ಯದಲ್ಲಿ ರೈತ ಅಸುನೀಗಿದ್ದಾನೆ.