ಸುದ್ದಿ ಸಂಕ್ಷೇಪ
ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಪರಾರಿ
ಕೊಟ್ಟೂರು: ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಸಮೀಪದ ಚಿರಿಬಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಬಾಲಕಿಯ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅತ್ಯಾಚಾರದ ಕುರಿತು ವರದಿಯಾಗುತ್ತಿದ್ದಂತೆಯೇ ಆರೋಪಿ ಚಿರಿಬಿ ಗ್ರಾಮದ ಪೆದ್ದಣ್ಣ (25) ತಲೆಮರೆಸಿಕೊಂಡಿದ್ದಾನೆ. ಯುವಕನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ತಹಬಂದಿಗೆ ಬಾರದ ಕಾಡ್ಗಿಚ್ಚು: ಅಪಾರ ಬಿದಿರು ಮೆಳೆ, ಮರ ಭಸ್ಮ
ನಾಪೋಕ್ಲು: ಕೊಟ್ಟಮುಡಿ ಕಾವೇರಿ ಸೇತುವೆ ಸಮೀಪ ಕಾಡಿನಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಬಿದಿರು ಮೆಳೆ, ಮರಗಳು ಭಸ್ಮವಾಗಿವೆ. ಮಾಹಿತಿ ತಿಳಿದ ಮಡಿಕೇರಿ ಆಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರೂ ರಸ್ತೆ ಸರಿಯಾಗಿಲ್ಲದೆ ಸ್ಥಳಕ್ಕೆ ತೆರಳಲು ಸಾಧ್ಯವಾಗಿಲ್ಲ. ಪೊಲೀಸ್ ಸಿಬ್ಬಂದಿ ನೆರವಿನೊಂದಿಗೆ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ರಾತ್ರಿವರೆಗೂ ಸಂಪೂರ್ಣವಾಗಿ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.