ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಸವಣ್ಣ ತತ್ವಾದರ್ಶ ಪಾಲಿಸಿ: ಸಂಗನಬಸವ ಶ್ರೀ

Lingaraj Badiger
Updated On : 3 May 2014, 11:54 am

ಹೊಸಪೇಟೆ: ಬಸವಣ್ಣನ ತತ್ವಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದು ಸ್ಥಳೀಯ ಕೊಟ್ಟೂರುಸ್ವಾಮಿ ಮಠದ ಜಗದ್ಗುರು ಸಂಗನಬಸವ ಸ್ವಾಮೀಜಿ ಹೇಳಿದರು.
ನಗರದ ಕೊಟ್ಟೂರುಸ್ವಾಮಿ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಸವ ಜಯಂತಿ ಆಚರಣೆ, 41ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣನವರ ತತ್ವಗಳನ್ನು ಬದುಕಿನಲ್ಲಿ ಎಷ್ಟು ಅಳವಡಿಸಿಕೊಂಡಿದ್ದೀರಿ ಎನ್ನುವುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಿ. ಇನ್ನೊಬ್ಬರಿಗೆ ತೊಂದರೆ ನೀಡದಂತೆ ಸ್ವಾವಲಂಬಿಗಳಾಗಿ ಜೀವನ ಸಾಗಿಸಿ. ಬಸವಣ್ಣ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ ಎಲ್ಲರೂ ಅಳವಡಿಸಿಕೊಂಡರೆ ಸುಖಿ ಸಮಾಜ ನಿರ್ಮಾಣವಾಗುವುದು ಎಂದರು.
ವಿಜಯನಗರ ಕಾಲೇಜಿನ ಡಾ. ಎಚ್.ಎಂ. ಚಂದ್ರಶೇಖರ್ ಶಾಸ್ತ್ರಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಬಸವಣ್ಣನ ವಿಚಾರಧಾರೆ ಮುಖ್ಯ. ಅವರ ಆಲಯ, ಮೂರ್ತಿ, ಭವನ ನಿರ್ಮಾಣಕ್ಕಿಂತ ಅವರ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಭೀಮಾನಾಯ್ಕ ಮಾತನಾಡಿ, 41 ವರ್ಷಗಳ ಕಾಲ ಸರ್ವ ಜನಾಂಗದ ಸಾಮೂಹಿಕ ವಿವಾಹವನ್ನು ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ. ನೂತನ ವಧು-ವರರ ಬದುಕು ಸುಂದರವಾಗಲಿ ಎಂದರು.
ದರೂರು ಕೊಟ್ಟೂರು ದೇಶಿಕೇಂದ್ರ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಶಾಸಕ ಆನಂದ್ ಸಿಂಗ್ ತಂದೆ ಪೃಥ್ವಿರಾಜ್ ಸಿಂಗ್, ಪುತ್ರ ಸಿದ್ಧಾರ್ಥ ಸಿಂಗ್, ಷಣ್ಮುಖಪ್ಪ ಕೆಂಡದ, ಬಸವರಾಜ ಚೆಳ್ಳೂರು, ಕೆ. ಚಂದ್ರಶೇಖರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸಾಲಿಸಿದ್ದಯ್ಯಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಬಿಸಾಟಿ ಸೋಮಪ್ಪ, ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ, ನಗರಸಭೆ ಸದಸ್ಯ ಚಂದ್ರಕಾಂತ್ ಕಾಮತ್, ಡಾ. ಮಹಬಳೇಶ್ವರ ರೆಡ್ಡಿ, ಅಕ್ಕನ ಬಳಗದ ಕೋರಿಶೆಟ್ಟಿ ರತ್ನಮ್ಮ, ಕೆ. ಶಿವಮೂರ್ತಿ, ಮಕ್ಕಳ ಜಿಲ್ಲಾ ಸಂರಕ್ಷಣಾಧಿಕಾರಿ ಮಹ್ಮದ್ ಸರ್ವರ್, ಬಾವಿಕಟ್ಟಿ ಮುರಳಿ ಇದ್ದರು.
22 ಜೋಡಿ ನೂತನ ದಾಂಪತ್ಯಕ್ಕೆ ಕಾಲಿಟ್ಟರು. ಷಟಸ್ಥಲ ಧ್ವಜಾರೋಹಣವನ್ನು ಗರಗ ನಾಗಲಾಪುರದ ಮರಿಮಹಾಂತ ಸ್ವಾಮೀಜಿ ನೆರವೇರಿಸಿದರು. ಸಮಾರಂಭ ಆರಂಭಕ್ಕೆ ಮುನ್ನ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಬಸವೇಶ್ವರ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆಯಲ್ಲಿ ನೂತನ ವಧು-ವರರು, ಡೊಳ್ಳು, ನಂದಿಕೋಲು, ಭಜನಾ ತಂಡಗಳು ಭಾಗವಹಿಸಿ ಗಮನ ಸೆಳೆದವು. ವಿವಾಹ ಸಮಾರಂಭದ ಬಳಿಕ ಉಚಿತ ಅನ್ನ ಸಂತರ್ಪಣೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement