ರಾಣಿಬೆನ್ನೂರಲ್ಲೇ 81ನೇ ಸಾಹಿತ್ಯ ಸಮ್ಮೇಳನ
ರಾಣಿಬೆನ್ನೂರು: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಣಿಬೆನ್ನೂರಿನಲ್ಲೇ ನಡೆಸಲು ಕೇಂದ್ರ ಕಸಾಪ ಸಮಿತಿ ನಿರ್ಣಯ ತೆಗೆದುಕೊಂಡಿದ್ದು, ಯಾವುದೇ ಗೊಂದಲಕ್ಕೀಡಾಗದೆ ಎಲ್ಲರೂ ಸಹಕರಿಸಬೇಕು ಎಂದು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಎಚ್.ಎಸ್. ಮುದಿಗೌಡ್ರ ಮನವಿ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲಿಕ ಹಾಲಂಬಿ ಏ. 25ರಂದು ಬೆಂಗಳೂರಿನ ಸಾಹಿತ್ಯ ಭವನದಲ್ಲಿ ಕರೆದಿದ್ದ ಕೇಂದ್ರ ಕಸಾಪ ಸಮಿತಿ ಹಾಗೂ ಜಿಲ್ಲಾ ಸಮಿತಿ ಸಭೆಯಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿಯೇ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಉಪಸ್ಥಿತರಿದ್ದ ಕಸಾಪ ಕೇಂದ್ರ ಹಾಗೂ ಜಿಲ್ಲಾ ಸಮಿತಿ ಸದಸ್ಯರು ರಾಣಿಬೆನ್ನೂರಲ್ಲಿ ಸಮ್ಮೇಳನ ನಡೆಸಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿನಾಕಾರಣ ಗೊಂದಲ ಬೇಡ: ಜಿಲ್ಲೆಯ ಶಾಸಕರ ಮತ್ತು ಮಠಾಧೀಶರ ಸಭೆ ಕರೆದು ಒಪ್ಪಿಗೆ ಪಡೆದು ಸಮ್ಮೇಳನ ನಡೆಸಲು ಮುಂದಾಗಿಲ್ಲ ಅಥವಾ ತಮ್ಮ ಸಮ್ಮತಿ ಇಲ್ಲ ಎಂಬುದಾಗಿ ಪತ್ರಿಕೆಗಳಿಗೆ ಹೇಳಿಕೆ ನೀಡಿ ವಿನಾಕಾರಣ ಗೊಂದಲ ಸೃಷ್ಟಿಸುವುದಕ್ಕಿಂತ ಕೇಂದ್ರ ಕಸಾಪ ಸಮಿತಿ ನಿರ್ಣಯದಂತೆ ರಾಣಿಬೆನ್ನೂರಿನಲ್ಲಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಎಚ್.ಎಸ್. ಮುದಿಗೌಡ್ರ ತಿಳಿಸಿದ್ದಾರೆ.