ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಸ್ ದರ ಏರಿಕೆ: ಎಸ್ಯುಸಿಐ (ಸಿ) ಪ್ರತಿಭಟನೆ

Rashmi Kasaragodu
Updated On : 6 May 2014, 12:52 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 5
ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಖಂಡಿಸಿ ಎಸ್ಯುಸಿಐ (ಸಿ) ಜಿಲ್ಲಾ ಘಟಕವು ಸೋಮವಾರ ನಗರದ ಹಳೆ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಎಸ್ಯುಸಿಐ(ಸಿ)ನ ಜಿಲ್ಲಾ ಕಾರ್ಯಕರ್ತರು ಹಳೆ ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ನಿಂತು ನಿಲ್ದಾಣದೊಳಗೆ ಪ್ರವೇಶಿಸುವ ಬಸ್ಗಳನ್ನು ತಡೆ ಹಿಡಿದು ಕೆಲಕಾಲ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಸೋಮಶೇಖರ್ ಮಾತನಾಡಿ, ಈಗಾಗಲೇ ಏರಿರುವ ದರಗಳಿಂದ ಬಸ್ಗಳಲ್ಲಿ ಸಂಚರಿಸಲು ಪ್ರಯಾಣಿಕರು ಹಿಂಜರಿಯುತ್ತಿದ್ದರೆ, ಇದೀಗ ಶೇ. 8ರಷ್ಟು ದರ ಏರಿಕೆ ಮಾಡುವ ಮೂಲಕ ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ ಹೆಚ್ಚಳ ನೆಪದಿಂದ ಈ ಕ್ರಮ ಅನಿವಾರ್ಯವಾಗಿದ್ದು, ಶೇ. 15ರಷ್ಟು ದರ ಏರಿಕೆ ಪ್ರಸ್ತಾಪವನ್ನು ಶೇ. 8ಕ್ಕೆ ಇಳಿಸಿದೆ ಎಂಬ ಸಾರಿಗೆ ಸಚಿವರ ಸಮರ್ಥನೆ ಖಂಡನೀಯವಾಗಿದೆ.  
ಒಂದೆಡೆ ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಸರ್ಕಾರಗಳು ಕಾರ್ಪೋರೇಟ್ ಮನೆತನಗಳಿಗೆ ಕೋಟ್ಯಂತರ ರುಪಾಯಿಗಳ ಸಬ್ಸಿಡಿ, ಸವಲತ್ತುಗಳನ್ನು  ನೀಡುವುದರಲ್ಲಿ ನಿರತವಾಗಿದೆ. ಅಷ್ಟೇ ಅಲ್ಲ, ಹಲವು ಯೋಜನೆಗಳ ಹೆಸರಿನಲ್ಲಿ ಒಂದು ಕಡೆ ಬಡವರಿಗೆ ಸೌಲಭ್ಯಗಳನ್ನು ಒದಗಿಸುತ್ತಾ, ದರ ಏರಿಕೆಯಂತಹ ಜನವಿರೋಧಿ ನೀತಿಯ ಮೂಲಕ ಇನ್ನೊಂದೆಡೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿ ಅವರಿಂದ ಹಣ ಸುಲಿಗೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ವಿವಿಧ ಜಿಲ್ಲೆಗಳಲ್ಲಿ ನಿತ್ಯ ಪ್ರಯಾಣ ಮಾಡುವ ಕೂಲಿ ಕಾರ್ಮಿಕರು, ರೈತರು, ಉದ್ಯೋಗಸ್ಥರು, ಮಧ್ಯಮವರ್ಗದ ಜನರು ಸೇರಿದಂತೆ ಎಲ್ಲ ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಕೂಡಲೆ ಬಸ್ ದರ ಏರಿಕೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಶಾಂತಾ, ಮಂಜುಳಾ, ಎ. ದೇವದಾಸ್, ಸೋಮಶೇಖರ ಗೌಡ, ರಾಧಾಕೃಷ್ಣ ಉಪಾಧ್ಯ, ಡಾ. ಪ್ರಮೋದ್, ಶಾಂತಾ, ಗೋವಿಂದ್, ಉಮೇಶ್.ಎಸ್, ಸುರೇಶ್, ಈಶ್ವರಿ, ರಫಿಕ್ ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement