ಸಂಡೂರು ರೈತರಿಗೆ ಆಲಿಕಲ್ಲು ಮಳೆ ಆಪತ್ತು
ಕನ್ನಡಪ್ರಭ ವಾರ್ತೆ, ಸಂಡೂರು, ಮೇ 5
ತಾಲೂಕಿನ ಚೋರನೂರು ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಭಾನುವಾರ ಸುರಿದ ಆಲಿಕಲ್ಲು ಮಳೆಯಿಂದ ರೈತರಿಗೆ ತೊಂದರೆ ಉಂಟಾಗಿದೆ.
ಯಶವಂತನಗರ, ಬಂಡ್ರಿ, ಡಿ. ಮಲ್ಲಾಪುರ, ಅಂಕಮ್ಮನಾಳ್, ಸೋವೇನಹಳ್ಳಿ, ತೋಣಸಿಗೇರಿ, ತುಂಬರಗುದ್ದಿ, ಮಲ್ಲಾರಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಅನಿರೀಕ್ಷಿತವಾಗಿ ಮಳೆ ಬಿದ್ದ ಪರಿಣಾಮ ನೀರಾವರಿ ಆಶ್ರಯದಲ್ಲಿ ಬೆಳೆದ ಈರುಳ್ಳಿ, ಶೇಂಗಾ, ಮಿಡಿಸೌತೆ ಬೆಳೆಗಳು ಹಾನಿಗೊಳಗಾಗಿದ್ದು, ಬೇಸಾಯಕ್ಕಾಗಿ ವಿನಿಯೋಗಿಸಿದ್ದ ಲಕ್ಷಾಂತರ ರು. ಹಾಳಾಗಿದೆ ಎಂದು ಹಾನಿಗೊಳಗಾದ ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕಂಗೆಟ್ಟ ಹುಚ್ಚೇನಹಳ್ಳಿ:
ನೀರಾವರಿ ಆಶ್ರಯದಲ್ಲಿ ಬೆಳೆದಿದ್ದ ಅಂದಾಜು 40ರಿಂದ 50 ಎಕರೆ ಪ್ರದೇಶದ ಮಿಡಿಸೌತೆ ಬೆಳೆ ಸಂಪೂರ್ಣ ನಾಶವಾಗಿದ್ದು, ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಇದೇ ಗ್ರಾಮದ ಮೂಗಪ್ಪ ಎಂಬುವವರ ಕೋಳಿ ಫಾರ್ಮ್ ಒಂದರಲ್ಲಿ 150 ಕೋಳಿಗಳು ಸಿಡಿಲು, ಜಲಾವೃತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿವೆ. ಈ ಭಾಗದ ಹಳ್ಳಿಗಳಲ್ಲಿ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಹುಚ್ಚೇನಹಳ್ಳಿ ಸೇರಿದಂತೆ ಕೆಲ ಗ್ರಾಮಗಳಿಗೆ 48 ಗಂಟೆಗಳಿಂದ ವಿದ್ಯುತ್ ಇಲ್ಲ ಎಂಬುದನ್ನು ಗ್ರಾಮಸ್ಥರು ತಿಳಿಸಿದ್ದಾರೆ.
ತುಂಬಿದ ಕೆರೆ ಕಟ್ಟೆಗಳು:
ಆಕಸ್ಮಿಕ ಆಲಿಕಲ್ಲು ಮಳೆ ರೈತರಿಗೆ ಸಂಕಷ್ಟ ನೀಡಿರುವುದು ಒಂದು ಕಡೆಯಾದರೆ, ನೀರಿಲ್ಲದೆ ಒಣಗಿದ್ದ ಸೋವೆನಹಳ್ಳಿ, ಹುಚ್ಚೇನಹಳ್ಳಿ, ಕಾಳಿಂಗೇರಿ, ಯಶವಂತನಗರದ ನಾರಿಹಳ್ಳ, ತುಂಬರಗುದ್ದಿಯ ಕೆರೆ, ಹಳ್ಳ ಕಟ್ಟೆಗಳು ಒಂದೇ ದಿನದ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದು ಜನ ಜಾನುವಾರುಗಳಿಗೆ ನೀರು ದೊರೆತಂತಾಗಿದೆ.