ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಿರುಕುಳ: 14ರಂದು ಸಾರಿಗೆ ನೌಕರರ ಪ್ರತಿಭಟನೆ

Mainashree
Updated On : 8 May 2014, 10:31 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 7
ಬಳ್ಳಾರಿ ಮತ್ತು ಹೊಸಪೇಟೆ ವಿಭಾಗಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆಡಳಿತಯಂತ್ರ ಕುಸಿದಿದ್ದು, ಕಾರ್ಮಿಕರಿಗೆ ವಿನಾಕಾರಣ ಕಿರುಕುಳ, ಶೋಷಣೆಗೆ ಒಳಪಡಿಸಲಾಗುತ್ತಿದೆ.
ಇದನ್ನು ಖಂಡಿಸಿ ಮೇ 14ರಂದು ಜಿಲ್ಲೆಯ ಹೊಸಪೇಟೆ ಬಸ್ ನಿಲ್ದಾಣದ ಮುಂಭಾಗ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ (ಬಿಎಂಎಸ್ ಸಂಯೋಜಿತ)ದಿಂದ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ ಎಂದು ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ವಿಜಯ್ ಕುಮಾರ್ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ವಿಭಾಗದಲ್ಲಿ ಎಲ್ಲ ಘಟಕಗಳಲ್ಲಿ ವಾಹನಗಳಿಗೆ ಸರಿಯಾದ ಕ್ರಮದಲ್ಲಿ ನಿರ್ವಹಣೆ ನಡೆಯದೇ ಚಾಲಕರು ಮತ್ತು ನಿರ್ವಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಒಂದು ಶಿಫ್ಟ್‌ಗೆ ಇರಬೇಕಾದ ಮೆಕ್ಯಾನಿಕ್‌ಗಳ ಸಂಖ್ಯೆಯು ಅರ್ಧಕ್ಕಿಂತಲೂ ಕಡಿಮೆ ಇದ್ದು, ಕೆಲಸದ ಒತ್ತಡ ಅಧಿಕವಾಗಿದೆ. ಸರಿಯಾದ ಟೈರ್‌ಗಳು ಇಲ್ಲದೇ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಟೈರ್‌ಗಳನ್ನು ಜೋಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕ-ನಿರ್ವಾಹಕರುಗಳು ಎಲ್‌ಎಂಎಸ್ ಯಂತ್ರ (ರಜೆ ನೀಡುವ ಯಂತ್ರ)ದ ಸಮಸ್ಯೆಯಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಬಳ್ಳಾರಿ ಹಾಗೂ ಹೊಸಪೇಟೆ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು, ಅಧಿಕಾರಿಗಳಿಂದ ಆಗುತ್ತಿರುವ ತೊಂದರೆ, ಕಿರುಕುಳದ ಬಗ್ಗೆ ಗುಲ್ಬರ್ಗದಲ್ಲಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಮೂರ್ತಿ ಅವರಿಗೆ ಹಾಗೂ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಈ ಹಿಂದೆ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ ವಿ.ಪಿ. ಬಸುರಾವ್ ತಮ್ಮ ಹಿಂಬಾಲಕರುಗಳ ಮುಖಾಂತರ ಘಟಕಗಳಲ್ಲಿ ಒತ್ತಾಯಪೂರ್ವಕವಾಗಿ ಕಾರ್ಮಿಕರಿಂದ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ವಿ.ಪಿ.ಬಸುರಾವ್‌ರನ್ನು ಮರಳಿ ಹೊಸಪೇಟೆ ವಿಭಾಗ ನಿಯಂತ್ರಣಾಧಿಕಾರಿಯಾಗಿ ತರಲು ಕಾರ್ಮಿಕರ ಮೇಲೆ ಒತ್ತಡ ಹೇರುತ್ತಿರುವ ಅಧಿಕಾರಿಗಳನ್ನು ಸಂಸ್ಥೆಯ ಸೇವೆಯಿಂದ ವಜಾ ಮಾಡುವಂತೆ ಸಂಘದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಸಾರಿಗೆ ಸಂಸ್ಥೆಯ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement