ಜಿಪಂ ಮೀಸಲಾತಿ ಬದಲು: ಕಾಂಗ್ರೆಸ್ ತಳಮಳ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 7
ಜಿಲ್ಲಾ ಪಂಚಾಯ್ತಿ ಮೂರನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯ ಮೀಸಲಾತಿಯನ್ನು ಪ್ರಕಟಿಸಲಾಗಿತ್ತು. ಆದರೆ, ಏಕಾಏಕಿ ಮೀಸಲಾತಿಯನ್ನು ಬದಲಾಯಿಸಿರುವುದು ಜಿಲ್ಲಾ ಪಂಚಾಯ್ತಿ ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಬಾರಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆದರೆ ಈ ಬಾರಿ (ಬದಲಾಯಿಸಿದ ನಂತರ) ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ, ಮೀಸಲಾತಿ ಬದಲಾಯಿಸುವಂತೆ ಒತ್ತಡವಿದ್ದು, ಬದಲಾಯಿಸದಿದ್ದರೆ, ನ್ಯಾಯಾಲಯ ಮೆಟ್ಟಿಲು ಏರಲು ಸಿದ್ಧತೆಯನ್ನು ಕೆಲ ಸದಸ್ಯರು ನಡೆಸುತ್ತಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಪ್ರಕಟವಾದ ಮೀಸಲಾತಿಯ ಪ್ರಕಾರ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರೆ, ಇನ್ನು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆದರೆ ಘೋಷಣೆಯಾದ ಮೀಸಲಾತಿಯನ್ನು ಏಕಾಏಕಿ ಬದಲಾಯಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಅಧ್ಯಕ್ಷ ಸ್ಥಾನವು ಯಥಾವತ್ತಾಗಿ ಇದ್ದು, ಸಾಮಾನ್ಯ ವರ್ಗಕ್ಕೆ ಇದ್ದ ಉಪಾಧ್ಯಕ್ಷ ಸ್ಥಾನ ಮೀಸಲಾತಿಯನ್ನು ಸಾಮಾನ್ಯ ಮಹಿಳೆಗೆ ಬದಲಾಯಿಸಿರುವುದು ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಮೀಸಲಾತಿಯಲ್ಲಿ ಅಸಮಾನತೆ
ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು, ಆದರೆ ಇದೀಗ ಮೂರನೇ ಅವಧಿಗೆ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಯಿಸಿದರೆ ಹೇಗೆ, ಅಲ್ಲದೆ ಮೀಸಲಾತಿ ಘೋಷಣೆಯಾದ ನಂತರ ಬದಲಾವಣೆಯ ಅಗತ್ಯವಾದರೂ ಏನಿತ್ತು ಎಂಬುದು ಬಳ್ಳಾರಿ ಜಿಲ್ಲಾ ಪಂಚಾಯ್ತಿ ಕೆಲ ಕಾಂಗ್ರೆಸ್ ಸದಸ್ಯರ ಪ್ರಶ್ನೆಯಾಗಿದೆ. ಸರ್ಕಾರದ ನೀತಿಗೆ ಕಾಂಗ್ರೆಸ್ ಸದಸ್ಯರು ಆಂತರಿಕವಾಗಿ ಅಸಮಾಧಾನ ಹೊಂದಿದ್ದಾರೆ. ಎಲ್ಲರಿಗೂ ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕೆಂದು ಮೀಸಲಾತಿ ಜಾರಿಗೆ ತಂದರೆ, ಇದೀಗ ಮೀಸಲಾತಿಯನ್ನು ಘೋಷಣೆಯಲ್ಲಿ ವ್ಯತ್ಯಾಸ ಮಾಡುವುದು ಎಷ್ಟು ಸರಿ ಎಂಬುದು ಕಾಂಗ್ರೆಸ್ ಸದಸ್ಯರ ಪ್ರಶ್ನೆಯಾಗಿದೆ.
ಎರಡು ಹುದ್ದೆಗೆ ಪೈಪೋಟಿ
ಜಿ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಘೋಷಣೆಯಾಗಿರುವುದೇ ತಡ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿತ್ತು. ಅಲ್ಲದೆ ಯಾರನ್ನು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಮಾಡಬೇಕೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿತ್ತು. ಎರಡನೇ ಅವಧಿ ಮಧ್ಯದಲ್ಲಿಯೇ ಬಿಜೆಪಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಕೆಳಗಿಳಿಸಿ, ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಮೂರನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ತೀವ್ರ ಪೈಪೋಟಿ ನಡೆಯುತ್ತಿರುವುದರಿಂದ, ಮೀಸಲಾತಿ ಗೊಂದಲ ಏರ್ಪಟ್ಟಿರುವುದರಿಂದ ಬಿಜೆಪಿ ತನ್ನ ಪ್ರಾಬಲ್ಯ ಸಾಧಿಸಲು ಮುಂದಾದರೂ ಆಶ್ಚರ್ಯ ಪಡಬೇಕಿಲ್ಲ.
ನ್ಯಾಯಾಲಯ ಮೆಟ್ಟಿಲೇರುವ ಸಾಧ್ಯತೆ
ಬದಲಾಗಿರುವ ಮೀಸಲಾತಿಯನ್ನು ಆರಂಭದಲ್ಲಿ ಪ್ರಕಟವಾದ ರೀತಿಯಲ್ಲಿ ಇರುವಂತೆ ಜಿಲ್ಲಾ ಪಂಚಾಯ್ತಿ ಕಾಂಗ್ರೆಸ್ ಸದಸ್ಯರು ಪ್ರಯತ್ತಿಸುತ್ತಿದ್ದಾರೆ. ಒಂದು ವೇಳೆ ಒಪ್ಪದೆ ಹೋದರೆ, ಮೀಸಲಾತಿಯನ್ನು ಪ್ರಶ್ನಿಸಿ, ನ್ಯಾಯಾಲಯದ ಮೆಟ್ಟಿಲು ಏರುವ ಸಾಧ್ಯತೆ ಇದೆ. ಈ ಚುನಾವಣೆಯು ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರಲ್ಲಿ ಭಿನ್ನಮತ ಹೆಚ್ಚಾಗಲು ಕಾರಣವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇನ್ನು ಮೀಸಲಾತಿಯನ್ನು ಬದಲಾಯಿಸುವಲ್ಲಿ ಜಿಲ್ಲೆಯ ಕೆಲ ಕಾಂಗ್ರೆಸ್ ಜನಪ್ರತಿನಿಧಿಗಳ ಕೈವಾಡವಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿದೆ.
ಬಿಜೆಪಿಗೆ ಲಾಭವಾಗುವುದೇ?
ಮೀಸಲಾತಿ ಬದಲಾವಣೆಯಿಂದ ಕಾಂಗ್ರೆಸ್ನಲ್ಲಿ ಗೊಂದಲಗಳು ಮುಂದುವರಿದರೆ, ಬಿಜೆಪಿ ಇಂತಹ ಗೊಂದಲಗಳ ಲಾಭವನ್ನು ಪಡೆಯಲು ಕಾತುರದಿಂದ ಕಾಯುತ್ತಿದೆ.
ಈಗಾಗಲೇ ಬಿಜೆಪಿ ಕೆಲ ಮುಖಂಡರು, ಸದಸ್ಯರು ಕಾಂಗ್ರೆಸ್ ತೆಕ್ಕೆಯಲ್ಲಿರುವ ಜಿಲ್ಲಾ ಪಂಚಾಯ್ತಿ ಸದಸ್ಯರನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ, ಒಂದು ವೇಳೆ ಕಾಂಗ್ರೆಸ್ನಲ್ಲಿ ಅಸಮಾಧಾನ ಮುಂದುವರಿದಲ್ಲಿ ಇದು ಬಿಜೆಪಿಗೆ ವರದಾನವಾಗುವ ಸಾಧ್ಯತೆ ಇದೆ.
ಶಶಿಧರ ಮೇಟಿ