ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ: ಜೆಸ್ಕಾಂಗೆ ಮನವಿ
ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ತೋಟದ ಮನೆಗಳಿಗೆ ಅಧಿಕೃತವಾಗಿ ಪಡೆದುಕೊಂಡಿರುವ ವಿದ್ಯುತ್ ಪೂರೈಕೆಯನ್ನು ಜೆಸ್ಕಾಂನವರು ನಿಲುಗಡೆಗೊಳಿಸಿರುವುದನ್ನು ತಕ್ಷಣ ರದ್ದುಗೊಳಿಸಲು ಆಗ್ರಹಿಸಿ ರೈತರು ಬುಧವಾರ ಹಗರಿಬೊಮ್ಮನಹಳ್ಳಿ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಪತ್ರ ಅರ್ಪಿಸಿದರು.
ಹಲವು ದಶಕಗಳಿಂದಲೂ ತೋಟದಲ್ಲಿಯೇ ಮನೆಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದು, ಇಲಾಖೆ ವಿಧಿಸಿದ ಶುಲ್ಕತೆತ್ತು ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಮೀಟರ್ ಅಳವಡಿಸಿಕೊಂಡು ಬಳಸಿದ ವಿದ್ಯುತ್ ಶುಲ್ಕವನ್ನು ಪಾವತಿಸುತ್ತ ಬರುತ್ತಿದ್ದೇವೆ. ಆದರೆ, ಈಗ ಇದ್ದಕ್ಕಿದ್ದಂತೆಯೇ ನಮ್ಮ ಮನೆಗಳ ವಿದ್ಯುತ್ ಸಂಪರ್ಕವನ್ನು ಕಟ್ ಮಾಡಿರುವುದನ್ನು ಖಂಡಿಸಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ರಾತ್ರಿ ಕಳ್ಳಕಾಕರ ಹಾಗೂ ಕ್ರೂರ ಪ್ರಾಣಿಗಳ ಹಾವಳಿಗೆ ನಾವು ತುತ್ತಾಗುವ ಸಂಭವವಿದ್ದು, ಒಂದು ವಾರದೊಳಗಡೆ ಮತ್ತೆ ನಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಇಲ್ಲದಿದ್ದರೆ ನಾವು ಗ್ರಾಹಕರ ವೇದಿಕೆಯ ಮೂಲಕ ನ್ಯಾಯ ಪಡೆಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತಾಲೂಕಿನ ತೋಟದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ ಜಿ. ಸೂರಿಬಾಬು, ಆರ್. ಶೇಖರಪ್ಪ, ಎಸ್.ಎಸ್. ಎತ್ತಿಮನಿ, ಜೋಗಿರಾಮ, ಜಿ. ನರಸಿಂಹರಾಜು, ಎಂ. ರಾಮಮೋಹನ್ ರಾವ್, ವಿ.ಬಸವರಾಜಯ್ಯ, ಡಿ. ಸೀತಾರಾಮದಾಸರಾಜು, ಎಸ್. ರಾಮಕೃಷ್ಣರಾಜು, ಡಿ. ನಾರದಮುನಿ, ಸಿ.ಹೆಚ್. ಕೃಷ್ಣಂರಾಜು, ಡಿ. ಗೋವಿಂದರಾಜು, ಜಿ. ವೆಂಕಟರಾಜು ಮನವಿ ಪತ್ರಕ್ಕೆ ಸಹಿಮಾಡಿ ಜೆಸ್ಕಾಂ ಎಇಇ ಮೋಟ್ಲಾ ನಾಯ್ಕಗೆ ಅರ್ಪಿಸಿದ್ದಾರೆ.