ನಿವೇಶನ, ರು. 1500 ಮಾಸಾಶನಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಮೇ 7
ನಿವೇಶನ ಹಾಗೂ ರು. 1500 ಮಾಸಾಶನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಘಟಕದ ನೂರಾರು ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘದ ಕಾರ್ಯಕರ್ತರು ತಾಲೂಕು ಕಚೇರಿಗೆ ತೆರಳಿ ಉಪತಹಸೀಲ್ದಾರ್ ಬಿ. ಮಲ್ಲೇಶಪ್ಪರಿಗೆ ಮನವಿ ಸಲ್ಲಿಸಿದರು.
ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷ ಬಿ. ಅಡಿವೆಪ್ಪ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕಳೆದ ವರ್ಷದ 9 ತಿಂಗಳ ಮಾಸಾಶನವನ್ನು ದೇವದಾಸಿಯರಿಗೆ ನೀಡುವುದಲ್ಲದೆ, ರು. 1500 ಹೆಚ್ಚಿಸಬೇಕೆಂದು ಸರ್ಕಾರವನ್ನು ಆಗ್ರಹಪಡಿಸಿದರು. ಸಿರುಗುಪ್ಪ ತಾಲೂಕಿನಲ್ಲಿ ದೇವದಾಸಿ ಮಹಿಳೆಯರಿಗೆ ನಿವೇಶನವನ್ನು ನೀಡಿ, ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.
ತಮ್ಮ ವಿವಿಧ ಬೇಡಿಕೆಗಳು ಈಡೇರದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಸಂಘದ ಕಾರ್ಯಕರ್ತರು ಸರ್ಕಾರವನ್ನು ಎಚ್ಚರಿಸಿದರು.
ನಂತರ ತಾಲೂಕು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಈರಮ್ಮ ಮಾತನಾಡಿದರು.
ಉಪತಹಸೀಲ್ದಾರ್ ಬಿ.ಮಲ್ಲೇಶಪ್ಪ ತಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ ನಂತರ ದೇವದಾಸಿ ವಿಮೋಚನಾ ಸಂಘದ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.