ಪಿಯು: ವಿದ್ಯಾರ್ಥಿನಿಯರು ಮುಂದೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 9
2014ರ ದ್ವಿತೀಯ ಪಿಯು ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿಯು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇಕಡಾವಾರು ಫಲಿತಾಂಶದಲ್ಲಿ ಗ್ರಾಮೀಣರಿಗಿಂತ ನಗರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 19741 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ 14,366, ಪುನರಾವರ್ತಿತರು 4035 ಹಾಗೂ ಖಾಸಗಿಯಾಗಿ 1340 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟು 10,065 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ಇದರಲ್ಲಿ 8663 ವಿದ್ಯಾರ್ಥಿಗಳು ಹೊಸ, 1132 ಪುನರಾವರ್ತಿತ ಹಾಗೂ 270 ಖಾಸಗಿ ಅಭ್ಯರ್ಥಿಗಳಿದ್ದಾರೆ.
ಉತ್ತೀರ್ಣಗೊಂಡ ವಿದ್ಯಾರ್ಥಿಗಳಲ್ಲಿ 4853 ಬಾಲಕರು ಮತ್ತು 5212 ಬಾಲಕಿಯರಿದ್ದಾರೆ. ಪ.ಜಾತಿ ಶೇ.40.8, ಪ.ಪಂ 42.51, ವರ್ಗ 1 ಶೇ. 49.28, ವರ್ಗ 2ಎ ಶೇ. 56.79, ವರ್ಗ 2ಬಿ ಶೇ. 51.3, ವರ್ಗ 3ಎ ಶೇ. 64.92, ವರ್ಗ 3ಬಿ ಶೇ. 55.53 ಹಾಗೂ ಇತರೆ ಶೇ. 54.82ರಷ್ಟು ಪಾಸಾಗಿದ್ದಾರೆ.
ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಶೇ. 52.39, ವಾಣಿಜ್ಯದಲ್ಲಿ ಶೇ. 67.81 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 62.36 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ನಗರ ಭಾಗದ ವಿದ್ಯಾರ್ಥಿಗಳಿಗಿಂತಲೂ ಗ್ರಾಮೀಣರು ಉತ್ತಮ ಫಲಿತಾಂಶ ಪಡೆದಿದ್ದರೂ ಶೇಕಡಾವಾರು ಪ್ರಮಾಣದಲ್ಲಿ ಶೇ. 3ರಷ್ಟು ಕಡಿಮೆ ಇದೆ. ನಗರ ಪ್ರದೇಶದ ಒಟ್ಟು 16202 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ, 11,770ರಷ್ಟು ಪಾಸಾಗಿದ್ದಾರೆ. 3539 ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷೆ ಬರೆದು, 2596ರಷ್ಟು ಪಾಸಾಗಿದ್ದಾರೆ. ನಗರದ ಬಾಲಕಿಯರು ಶೇ. 56.42, ಗ್ರಾಮೀಣ ಬಾಲಕಿಯರು ಶೇ. 53.94ರಷ್ಟು ಉತ್ತೀರ್ಣಗೊಂಡಿದ್ದಾರೆ.
ಬಾಲಕಿಯರ ಕಾಲೇಜು
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸ್ಥಳೀಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಈ ಬಾರಿ ಉತ್ತಮ ಫಲಿತಾಂಶ ಲಭಿಸಿದೆ. ಪರೀಕ್ಷೆ ಎದುರಿಸಿದ ಒಟ್ಟು 270 ವಿದ್ಯಾರ್ಥಿಗಳ ಪೈಕಿ 180 ಬಾಲಕಿಯರು ಉತ್ತೀರ್ಣಗೊಂಡಿದ್ದಾರೆ. ಶೇ. 67ರಷ್ಟು ಕಾಲೇಜು ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇ.54ರಷ್ಟು ಫಲಿತಾಂಶವಿತ್ತು. ಒಟ್ಟು 7 ಬಾಲಕಿಯರು ಡಿಸ್ಟಿಂಕ್ಷನ್, 37 ಮೊದಲ, 47 ದ್ವಿತೀಯ ಹಾಗೂ 89 ಬಾಲಕಿಯರು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ.
ಕಾಲೇಜಿನ ವಾಣಿಜ್ಯ ವಿಭಾಗದ ಮೌನಿಕಾ 554 (ಶೇ.93) ಕಾಲೇಜಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ. ಇದೇ ವಿಭಾಗದ ಮಾಧುರಿ 538 (ಶೇ.90), ಪೂಜಾಕುಮಾರಿ 535 (ಶೇ.90), ಸಂಗೀತ ಕುಮಾರಿ 526 (ಶೇ.88), ಸಂತೋಷ ಕುಮಾರಿ 502 (ಶೇ.84), ಕಲಾ ವಿಭಾಗದ ಫರಿನಾ ಫಾತೀಮಾ 536 (ಶೇ.90) ರಷ್ಟು ಅಂಕ ಪಡೆದು ಉತ್ತೀರ್ಣಗೊಂಡಿದ್ದಾರೆ.
ಕಳೆದ ವರ್ಷ ದ್ವಿತೀಯ ಪಿಯುನ ರಾಜ್ಯ ಪಠ್ಯಕ್ರಮವನ್ನು ಸಿಬಿಎಸ್‌ಇ ಪಠ್ಯ ಕ್ರಮವನ್ನಾಗಿ ಪರಿವರ್ತಿಸಿರುವುದು ವಿದ್ಯಾರ್ಥಿಗಳಿಗೆ ಸ್ವಲ್ಪ ಹೊರೆಯಾಗಿದ್ದು, ಜತೆಗೆ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯೇ ಶೇಕಡಾವಾರು ಫಲಿತಾಂಶದಲ್ಲಿ ಕುಸಿತ ಕಾಣಲು ಕಾರಣವಾಗಿದೆ. ಇದೇ ವಾರದಲ್ಲಿ ಜಿಲ್ಲೆಯ ಎಲ್ಲ ಕಾಲೇಜುಗಳ ಪ್ರಾಚಾರ್ಯರ ಸಭೆ ಕರೆದು ಫಲಿತಾಂಶ ಉತ್ತಮಗೊಳಿಸಲು ಕೈಗೊಳ್ಳಬಹುದಾದ ಅಗತ್ಯ ಕ್ರಮಗಳ ಕುರಿತು ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಟಿ. ತಿಮ್ಮರಾಯಪ್ಪ, ಡಿಡಿಪಿಯು