ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಕ್ಕು ಪತ್ರಕ್ಕಾಗಿ ರೈತರ ಮನವಿ

Vishwanath S
Updated On : 10 May 2014, 11:36 am

ಹೊಸಪೇಟೆ: ಅರಣ್ಯ ಇಲಾಖೆ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಿಲ್ಲಿಸಿ, ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ವಲಯ ಅರಣ್ಯ ಕಚೇರಿಗೆ ಆಗಮಿಸಿ ಗುರುವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಹಲಗಾಪುರ ಏರಿಯಾದಲ್ಲಿ ನೂರಾರು ರೈತರು ಆರಣ್ಯ ಭೂಮಿಯಲ್ಲಿ ಮೂರು ತಲೆಮಾರಿನಿಂದ ಸಾಗಾವಳಿ ಮಾಡುತ್ತಾ ಬಂದಿದ್ದಾರೆ. ಪಹಣಿಯ ಸಾಗುವಳಿದಾರರ ಹೆಸರಿನಲ್ಲಿ ರೈತರ ಹೆಸರು ನಮೂದಿತವಾಗಿದೆ. ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ಹಕ್ಕು ಪತ್ರ ನೀಡಬೇಕೆಂದು ಕೇಂದ್ರ ಸರ್ಕಾರ ಅರಣ್ಯ ಹಕ್ಕುಗಳ ಕಾಯ್ದೆ ತಿದ್ದುಪಡಿ ಮಾಡಿದ್ದರೂ, ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದ್ದು, ಬಹುತೇಕ ದಲಿತರೇ ಈ ಭೂಮಿ ಸಾಗಾವಳಿ ಮಾಡುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ರೈತರಿಗೆ ನ್ಯಾಯ ಒದಗಿಸಬೇಕೆಂದು ರೈತರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಂಗಪ್ಪ ದಾಸರ್, ಮುಖಂಡ  ಟೀಕ್ಯಾನಾಯ್ಕ, ಗೋವಿಂದ ನಾಯ್ಕ, ಎಲ್. ನ್ಯಾನಾ ನಾಯ್ಕ, ಎಲ್. ರಾಮನಾಯ್ಕ, ಲಕ್ಷ್ಮಣ ನಾಯ್ಕ, ರೆಡ್ಡಿ ನಾಯ್ಕ, ಸಿಐಟಿಯು ಮುಖಂಡ ಆರ್. ಭಾಸ್ಕರ ರೆಡ್ಡಿ, ಸಿ.ಎಚ್. ಮಂಜುನಾಥ ಈಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೊಸಪೇಟೆ: ರಾಯರಕೆರೆ ಜಲಾವೃತ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮೇ 9
ಬಿಸಿಲಿನ ತಾಪದಿಂದ ತತ್ತರಿಸಿದ ತಾಲೂಕಿನ ಜನರಿಗೆ ಗುರುವಾರ ಮಧ್ಯಾಹ್ನದಿಂದ ಶುಕ್ರವಾರ ಬೆಳಗ್ಗೆ 8 ಗಂಟೆಯವರೆಗೂ ಸುರಿದ ಧಾರಾಕಾರ ಮಳೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಆರಂಭವಾದ ಮಳೆಯು ರಾತ್ರಿ 8 ಗಂಟೆಯವರೆಗೂ ನಿರಂತರ ಸುರಿಯಿತು. ನಂತರ ಮತ್ತೆ ರಾತ್ರಿ 12 ಗಂಟೆಯಿಂದ ಶುಕ್ರವಾರ ಬೆಳಗಿನವರೆಗೆ ಧಾರಾಕಾರ ಸುರಿಯಿತು. ನಗರದ ಹೊರವಲಯದಲ್ಲಿರುವ ರಾಯರಕೆರೆ ಪ್ರದೇಶವೆಲ್ಲಾ ಜಲಾವೃತ್ತಗೊಂಡು, ಅಲ್ಲಿನ ನೂರಾರು ಎಕರೆ ಕಬ್ಬಿನ ಬೆಳೆ ಹಾನಿಯಾಗಿದೆ. ಸುಮಾರು 600ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕಬ್ಬು ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗಿತ್ತು. ಇನ್ನೂ ಕೆಲ ಗದ್ದೆಗಳಲ್ಲಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡು, ಮಡಿಕೆ ಹೊಡೆದು ಹೊಲ-ಗದ್ದೆಗಳನ್ನು ಹದ ಮಾಡಿಕೊಂಡಿದ್ದರು.
ರಾಯರಕೆರೆಯ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ-13ರಲ್ಲಿ 7-8 ತಿಂಗಳ ಹಿಂದೆ ಸುಗಮ ರಸ್ತೆ ನಿರ್ಮಾಣಕ್ಕಾಗಿ ಗುಡ್ಡದಲ್ಲಿ ಸುರಂಗ ಮಾರ್ಗ ಕೊರೆದು ರಸ್ತೆ ನಿರ್ಮಾಣ ಮಾಡಲಾಗಿತ್ತು. ಭಾರಿ ಮಳೆಯಿಂದಾಗಿ ಈ ಸುರಂಗ ಮಾರ್ಗದಿಂದ ರಾಯರಕೆರೆ ನೀರು ರಸ್ತೆಯಲ್ಲಿ ಹರಿದು ಬಂದಿದ್ದರಿಂದ ವಾಹನಗಳು ನೀರಿನಲ್ಲಿಯೇ ಸಂಚರಿಸಬೇಕಾಯಿತು. ಬೆಳಿಗ್ಗೆ ಕೆಲ ಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಒಂದು ಸುರಂಗ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿ ಇನ್ನೊಂದು ಸುರಂಗ ಮಾರ್ಗದ ಮೂಲಕ ವಾಹನಗಳ ಸಂಚಾರಕ್ಕೆ ವ್ಯವಸ್ಥೆಗೊಳಿಸಲಾಗಿತ್ತು.
ಮಧ್ಯಾಹ್ನದ ನಂತರ ಸುರಂಗ ಮಾರ್ಗದಲ್ಲಿ ನಿಂತಿರುವ ನೀರನ್ನು ಜೆಸಿಬಿ ಯಂತ್ರಗಳ ಮೂಲಕ ಹೊರಹಾಕಲಾಯಿತು.
ಹೊಸಪೇಟೆಯಲ್ಲಿ 74.4 ಮಿಮೀ, ಕಮಲಾಪುರದಲ್ಲಿ 71.4 ಮಿಮೀ, ಕಂಪ್ಲಿಯಲ್ಲಿ 55.2 ಮಿಮೀ, ಗಾದಿಗನೂರಿನಲ್ಲಿ 80.4 ಮಿಮೀ, ಮರಿಯಮ್ಮನಹಳ್ಳಿಯಲ್ಲಿ 90.0 ಮಿಮೀ ಮಳೆ ಸುರಿದಿದೆ. ಟಿ.ಬಿ. ಡ್ಯಾಂನಲ್ಲಿ 90.8 ಮಿಮೀ, ಹೊಸಪೇಟೆ ರೇಲ್ವೆ ನಿಲ್ದಾಣದಲ್ಲಿ 90 ಮಿಮೀ ಮಳೆ ಸುರಿದಿದೆ. ಆದರೆ ನಗರದ ಸಿದ್ದಲಿಂಗಪ್ಪ ಚೌಕಿ, ಎಸ್.ಆರ್. ನಗರ ಸೇರಿದಂತೆ ಕೆಲ ಪ್ರದೇಶ ಸೇರಿದಂತೆ ಕೆಲ ಸ್ಲಂಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು ಬಿಟ್ಟರೆ ಬೇರೆ ಯಾವುದೇ ಅನಾಹುತಗಳು ಆಗಿಲ್ಲ.
ಸಿರುಗುಪ್ಪ: ಮನೆಗಳಿಗೆ ಹಾನಿ
ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಮೇ 9
ತಾಲೂಕಿನಾದ್ಯಾಂತ ಗುರುವಾರ ಭಾರಿ ಮಳೆ ಆಗಿದೆ. ಸಂಜೆ 3ರಿಂದ 4ರ ವರೆಗೆ ಭಾರಿ ಮಳೆಯಾಗಿದ್ದು, ಇಡೀ ರಾತ್ರಿ ಸಾಧಾರಣ ಮಳೆ ಸುರಿದಿದೆ. ಹೆಚ್ಚಿನ ಮಳೆಯಾದ ಪರಿಣಾಮ ಸಿರುಗುಪ್ಪ ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯ ಎಚ್. ಹೊಸಳ್ಳಿಯಲ್ಲಿ 2 ಮನೆಗಳು 3 ಗುಡಿಸಲುಗಳು ಬಿದ್ದು ಸುಮಾರು ರು. 23 ಸಾವಿರ ನಷ್ಟವಾಗಿದೆ. ರಾಮಪ್ಪ, ಹುಲೇಶ, ಲಿಂಗಪ್ಪ, ಆಂಜಿನಪ್ಪ, ಬಾರಿಕೇರ ವೀರಭದ್ರಪ್ಪ ಅವರ ಮನೆಗಳು ಹಾಗೂ ಗುಡಿಸಲುಗಳು ಬಿದ್ದಿದ್ದು, ಯಾವುದೇ ಜೀವ ಹಾನಿಯಾದ ವರದಿಯಾಗಿಲ್ಲ. ಸಿರುಗುಪ್ಪ ತಾಲೂಕಿನಲ್ಲಿ 23 ಮಿ.ಮೀ. ಸರಾಸರಿ ಮಳೆ ಆಗಿದೆ.
ಮಳೆಯ ವಿವರ: ಕರೂರು 50 ಮಿ.ಮೀ, ತೆಕ್ಕಲಕೋಟೆ 40.6, ಎಂ.ಸೂಗೂರು 36.6, ರಾವಿಹಾಳ್ 30.2, ಹಚ್ಚೊಳ್ಳಿ 26.2, ಕೆ. ಬೆಳಗಲ್ 26.2, ಸಿರುಗುಪ್ಪ 23.8 ಮಿ.ಮೀ., ಸಿರಿಗೇರಿ ವ್ಯಾಪ್ತಿಯಲ್ಲಿ ತುಂತರಿನ ಸಾಧರಣಾ ಮಳೆ ಬಿದ್ದಿದೆ.
ಎರಡು ತಿಂಗಳಿನಿಂದಲೂ ಬಿಸಿಲಿನ ಬೇಗುದಿಯಲ್ಲಿ ಬೆಂದ ಸಿರುಗುಪ್ಪ ತಾಲೂಕಿನ 86 ಗ್ರಾಮಗಳ ಜನರು ಈ ಮಳೆಯಿಂದ ತಂಪಿನ ಆನಂದ ಕಂಡಿದ್ದಾರೆ.  ಈ ಬೇಸಿಗೆಯ ಹಿಂದೆ ಬಿದ್ದ ಮಳೆಯು ಭಾರಿ ಗಾಳಿ, ಗುಡುಗು, ಸಿಡಿಲಿನಿಂದ ಹೆಚ್ಚಿನ ಅನಾಹುತವನ್ನುಂಟು ಮಾಡಿತ್ತು. ಗುರುವಾರ ಕೇವಲ ಮಳೆ ಸುರಿದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಈ ಮಳೆ ರೈತಾಪಿ ಜನರಿಗೆ ಖುಷಿ ತಂದಿದೆ. ಭೂಮಿಯ ತಾಪಮಾನವನ್ನು ತಗ್ಗಿಸಲು ಈ ಮಳೆಯು ಅನುಕೂಲವಾಗಿದೆ. ಮುಂಗಾರು ಬೆಳೆಗೆ ಭೂಮಿ ಹಸನಗೊಳಿಸಲು ರೈತರಿಗೆ ಇಂತಹ ಮಳೆಯು ಸಹಾಯಕವಾಗಲಿದೆ.
ದ್ವಿತೀಯ ಪಿಯು: ತಂಬ್ರಹಳ್ಳಿ ಶೇ. 87
ಹಗರಿಬೊಮ್ಮನಹಳ್ಳಿ:  ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿನ ಅಕ್ಕಿಬಸಮ್ಮ ತೋಟಪ್ಪ ಪದವಿ ಪೂರ್ವ ಕಾಲೇಜು ಈ ಸಾಲಿನ ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಶೇ.87ರಷ್ಟು ಫಲಿತಾಂಶವನ್ನುಗಳಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಜೆ. ಸತೀಶ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಗುರುವಾರ ಮುಂಜಾನೆ ಫಲಿತಾಂಶವನ್ನು ಪಿಯುಸಿ ಮಂಡಳಿ ಇಂಟರ್ ನೆಟ್‌ಗೆ ಬಿಟ್ಟಿದ್ದು, ಅಧಿಕೃತ ಫಲಿತಾಂಶ ಶುಕ್ರವಾರ ಮಧ್ಯಾಹ್ನ ನಮ್ಮ ಕೈಸೇರಲಿದೆ ಎಂದು ಹೇಳಿ, ಈ ಸಾಲಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ಸೇರಿದಂತೆ 95 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 82 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 51 ವಿದ್ಯಾರ್ಥಿಗಳು ಪ್ರಥಮದರ್ಜೆ, 18 ವಿದ್ಯಾರ್ಥಿಗಳು ದ್ವಿತೀಯ ಹಾಗೂ 11 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ತಿಳಿಸಿದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿ. ರಮೇಶ 528 ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಯಾಗಿದ್ದು, ಯು. ಶಿಲ್ಪಾ 518 ಅಂಕಗಳಿಸಿ ದ್ವಿತೀಯ ಹಾಗೂ ಉಳಿದಂತೆ ಕಲಾವಿಭಾಗದ ಕೆ. ಬಸಮ್ಮ-506, ಎಚ್. ಲಕ್ಷ್ಮಿ-503 ಅಂಕಗಳಿಸಿ ನಂತರದ ಸ್ಥಾನ ಗಳಿಸಿಕೊಂಡಿದ್ದಾರೆ ಎಂದರು. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಕುಳಿತಿದ್ದು 49, 38 ವಿದ್ಯಾರ್ಥಿಗಳು ಉತ್ತೀರ್ಣ. ಪ್ರಥಮದರ್ಜೆ 25, ದ್ವಿತೀಯ 7 ಹಾಗೂ ತೃತೀಯ 6. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತಿದ್ದು 46, 44 ಉತ್ತೀರ್ಣ, ಎರಡು ಡಿಸ್ಟಿಂಕ್ಷನ್, ಪ್ರಥಮ 26, ದ್ವಿತೀಯ11, ತೃತೀಯ 5 ವಿದ್ಯಾರ್ಥಿಗಳು ಉರ್ತ್ತಿರ್ಣರಾಗಿದ್ದಾರೆ ಎಂದು ಸತೀಶ್ ಪತ್ರಿಕೆಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement