ವೀರಬ್ರಹ್ಮೇಂದ್ರ ಸ್ವಾಮಿ ಆರಾಧನೆ
ಬಳ್ಳಾರಿ: ಶ್ರೀ ಮದ್ವಿರಾಟ್ ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿಯ ಆರಾಧನೆ ಮತ್ತು 31ನೇ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮವು ನಗರದ ತೇರುಬೀದಿ ಸಮೀಪದ ಶ್ರೀ ಗಣೇಶ ದೇವಸ್ಥಾನದಲ್ಲಿ ಜರುಗಿತು.
ಬಳ್ಳಾರಿಯ ಸೇವಾ ಮತ್ತು ಪ್ರಚಾರ ಭಕ್ತವೃಂದವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರಾಧನೆ ನಿಮಿತ್ತ ಶುಕ್ರವಾರ ಬೆಳಗ್ಗೆ ಶ್ರೀ ಮದ್ವಿರಾಟ್ ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿಯ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ನಗರದ ಬೆಂಗಳೂರು ರಸ್ತೆಯಿಂದ ಪ್ರಾರಂಭಿಸಿ, ಬ್ರೂಸ್ ಪೇಟೆ, ಮೋತಿ ಸರ್ಕಲ್, ಕಾಳಮ್ಮ ಬೀದಿಯ ಮೂಲಕ ಶ್ರೀ ಗಣೇಶ್ ದೇವಸ್ಥಾನದವರೆಗೆ ನಡೆಸಲಾಯಿತು.
ಮೇ 5ರಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಆಂಧ್ರದ ಚಂದು ಭಾಸ್ಕರ್ ರಾವ್ ಭಾಗವತರ್, ಶ್ರೀ ಮದ್ವಿರಾಟ್ ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿಯ ಸಂಪೂರ್ಣ ಜೀವನ ಚರಿತ್ರೆ ಹಾಗೂ ಹರಿಕಥೆಯನ್ನು ಪ್ರಸ್ತುತ ಪಡಿಸಿದರು. ವಾದ್ಯ ವೃಂದವನ್ನು ಪಾಣ್ಯಮ್ ದಕ್ಷಿಣ ಮೂರ್ತಿ ವಿಜಯವಾಡ ವಾಯಿಲಿನ್, ಕಾಪುವರಪು ಸುಬ್ಬಾರಾವ್ ಪೆದ್ದ ಅಮಿರಂ ಇವರು ಮೃದಂಗ ವಾದನದ ಸಾಥ್ ನೀಡಿದರು.