ಅಕ್ಕಿ ಕಳ್ಳರ ಕಾರಿನಲ್ಲಿ ಅಧಿಕಾರಿಗಳ ಸಂಚಾರ
ಕನ್ನಡಪ್ರಭ ವಾರ್ತೆ, ಕಾರಟಗಿ, ಮೇ 12
ಉದ್ಯಮಕ್ಕೆ ಸರ್ಕಾರ ನೀಡಿದ ಕೋಟ್ಯಂತರ ರುಪಾಯಿ ವಿನಾಯ್ತಿ ಮತ್ತು ಅಲ್ಪ ಮೊತ್ತ ಉಳಿಸಿಕೊಂಡ ದೊಡ್ಡ ದೊಡ್ಡ ವರ್ತಕರ ನಕಲಿ ಇ ಪರ್ಮಿಟ್ ಹಾವಳಿಯಿಂದಾಗಿ ಪಟ್ಟಣದ ವಿಶೇಷ ಎಪಿಎಂಸಿ ಶುಲ್ಕ ಸಂಗ್ರಹಣೆಗೆ ಹಿನ್ನಡೆಗೆ ಮುಖ್ಯ ಕಾರಣವಾಗಿದೆ.
ಪ್ರಸಕ್ತ ಮಾರ್ಚ್ವರೆಗೆ ನಿಗದಿಪಡಿಸಿದ ಶುಲ್ಕ ಸಂಗ್ರಹಿಸಿಕೊಂಡು ಮೂರು ವರ್ಷಗಳಿಂದ ಯಥಾಪ್ರಕಾರ ಗುರಿಯನ್ನು ಈ ಮಾರುಕಟ್ಟೆ ಕಾಯ್ದುಕೊಂಡಿದೆ. ರಾಜ್ಯದಲ್ಲಿನ ಉಪ ಮಾರುಕಟ್ಟೆಯಲ್ಲೇ ಅತ್ಯಂತ ಹೆಚ್ಚು ಶುಲ್ಕ ಸಂಗ್ರಹಿಸುವ ಮಾರುಕಟ್ಟೆ ಎನ್ನುವ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು. ನಾಲ್ಕು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಈ ಭಾಗದಲ್ಲಿ ರೈಸ್ ಟೆಕ್ ಪಾರ್ಕ್ ಸ್ಥಾಪನೆ ಮಾಡುವ ಹಿನ್ನೆಲೆಯಲ್ಲಿ ಕಾರಟಗಿ, ಸಿದ್ದಾಪುರ ಹಾಗೂ ಪಾರ್ಕ್ ಸ್ಥಾಪನೆ ಪ್ರದೇಶ ನವಲಿ ಹೋಬಳಿಗಳನ್ನು ಸೇರಿಸಿ ವಿಶೇಷ ಎಪಿಎಂಸಿ ರಚಿಸಿತ್ತು.
ಎಪಿಎಂಸಿ ಅಧಿಕಾರಿಗಳು ನೀಡಿದ ದಾಖಲೆಗಳ ಪ್ರಕಾರ 2011-12ರಲ್ಲಿ ಮಾರುಕಟ್ಟೆಗೆ ರು. 8 ಕೋಟಿ ಗುರಿಯಲ್ಲಿ ರು. 6.7 ಕೋಟಿ, 2012-13ರಲ್ಲಿ ರು. 8 ಕೋಟಿ ಪೈಕಿ ರು. 7.6 ಕೋಟಿ ಹಾಗೂ ಪ್ರಸಕ್ತ ವರ್ಷ ಮಾರ್ಚ್ವರೆಗೆ ರು. 8.4 ಕೋಟಿ ಪೈಕಿ ರು. 6.9 ಕೋಟಿ ಶುಲ್ಕ ಸಂಗ್ರಹಿಸಿದೆ. ವಾಸ್ತವಿಕವಾಗಿ ನಿವ್ವಳದಲ್ಲಿ ವಸೂಲಿ ಶುಲ್ಕ ಕಡಿಮೆ ಕಾಣುತ್ತಿದ್ದರೂ ಜಿಲ್ಲೆಯ ವೈಯಕ್ತಿಕ ಮಾರುಕಟ್ಟೆಗಳ ಹೋಲಿಕೆ ನೋಡಿದರೆ ಕಾರಟಗಿ ಮಾರುಕಟ್ಟೆ ಶುಲ್ಕ ಹೆಚ್ಚು ಎನ್ನುತ್ತಾರೆ ಅಧ್ಯಕ್ಷ ಶಿವಾರೆಡ್ಡಿ ನಾಯಕ್.
ರು. 5.63 ಕೋಟಿ ವಿನಾಯ್ತಿ: ಇಲ್ಲಿ ಒಟ್ಟು 40ಕ್ಕೂ ಹೆಚ್ಚು ಅಕ್ಕಿ ಗಿರಣಿಗಳಿದ್ದು, 150ಕ್ಕೂ ಹೆಚ್ಚು ದಲಾಲಿ ಅಂಗಡಿಗಳು ರಾಜ್ಯ ಹಾಗೂ ನೆರೆ ರಾಜ್ಯಗಳಿಗೆ ಅಕ್ಕಿ, ಬತ್ತ ರವಾನೆ ಮಾಡುತ್ತವೆ. ಉದ್ಯಮಕ್ಕೆ ಉತ್ತೇಜನ ನೀಡಲು ನಾಲ್ಕು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಬಹುತೇಕ ಉದ್ಯಮಿಗಳಿಗೆ ಮಾರುಕಟ್ಟೆ ಶುಲ್ಕ ವಿನಾಯ್ತಿ ನೀಡಿದ ಹಿನ್ನೆಲೆಯಲ್ಲಿ ವಿಶೇಷ ಎಪಿಎಂಸಿ ಶುಲ್ಕ ಸಂಗ್ರಹಣೆ ಕಡಿಮೆಯಾಗಿದೆ. 2013-14ರಲ್ಲಿ ಒಟ್ಟು ರು. 5.63 ಕೋಟಿ ಶುಲ್ಕ ವಿನಾಯ್ತಿ ನೀಡಲಾಗಿದೆ. ನಾಲ್ಕು ವರ್ಷಗಳಿಂದಲೂ ಇಷ್ಟೇ ಪ್ರಮಾಣದಷ್ಟು ಶುಲ್ಕವನ್ನು ಇಲ್ಲಿನ ಉದ್ಯಮಿಗಳಿಗೆ ಉದ್ಯಮ ಬೆಳವಣಿಗೆ, ವಿಸ್ತರಣೆ, ವಿಸ್ತಾರಕ್ಕಾಗಿ ಶುಲ್ಕ ವಿನಾಯ್ತಿ ನೀಡಿದೆ. ಹೀಗಾಗಿ ಕಾರಟಗಿ ವಿಶೇಷ ಎಪಿಎಂಸಿ ಶುಲ್ಕ ಸಂಗ್ರಹಣೆ ಕಡಿಮೆಯಾಗಿದೆ. 2012-13ನೇ ಸಾಲಿನಲ್ಲಿ ಮಾರುಕಟ್ಟೆಗೆ ರು. 8.4 ಕೋಟಿ ಸಂಗ್ರಹ ಗುರಿ ಇತ್ತು. ರು. 6.90 ಕೋಟಿ ಸಂಗ್ರಹವಾಗಿದ್ದು, ರು. 5.63 ಕೋಟಿ ವಿನಾಯ್ತಿ ನೀಡಲಾಗಿದೆ. ಹಾಗೆ ನೋಡಿದರೆ ಒಟ್ಟು ರು. 12.53 ಕೋಟಿ ಸಂಗ್ರಹವಾಗಿ, ಶೇ. 149ರಷ್ಟು ಶುಲ್ಕ ಸಂಗ್ರಹ ಗುರಿ ಸಾಧಿಸಿದಂತಾಗಿದೆ ಎನ್ನುತ್ತವೆ ದಾಖಲೆಗಳು.
ಕಳ್ಳರೂ ಕಾರಣ: ಈ ಮಧ್ಯ ಸರ್ಕಾರಕ್ಕೆ ಕಟ್ಟಬೇಕಿದ್ದ ಅಲ್ಪ ಮೊತ್ತವನ್ನು ಕಟ್ಟದೇ ಉಳಿಸಿಕೊಂಡು ದಿಢೀರ್ ಶ್ರೀಮಂತಿಕೆ ಕಂಡ ಕೆಲ ದೊಡ್ಡ ವರ್ತಕರು ನಕಲಿ ಇ-ಪರ್ಮಿಟ್ ರಚಿಸಿ ಈ ವಿಶೇಷ ಎಪಿಎಂಸಿಗೆ ಮೋಸ ಮಾಡಿದ್ದೂ ಶುಲ್ಕ ಸಂಗ್ರಹದಲ್ಲಿ ಇಳಿಕೆಯಾಗಲು ಮಹತ್ವದ ಕಾರಣ ಎನ್ನುತ್ತವೆ ಅಧಿಕಾರಿ ಮೂಲಗಳು.
ಬತ್ತ ಖರೀದಿ ಮಾರಾಟ ಪ್ರಕ್ರಿಯೆಯಲ್ಲಿ ವರ್ತಕರು ಶುಲ್ಕ ಕಟ್ಟಿ ಇ-ಪರ್ಮಿಟ್ ಪಡೆಯಬೇಕು. ಆದರೆ, ಇಲ್ಲಿನ ಗುಂಪೊಂದು ಸರ್ಕಾರದ ತಂತ್ರಾಂಶವನ್ನೇ ಕದ್ದು, ನಕಲಿ ಇ-ಪರ್ಮಿಟ್ ಮೂಲಕ ವಹಿವಾಟು ನಡೆಸುತ್ತಿತ್ತು. ಇಂಥ ಹಗಲು ದರೋಡೆಯನ್ನು ಅಧಿಕಾರಿಯೊಬ್ಬರು ಪತ್ತೆಹಚ್ಚಿ ಒಟ್ಟು 6 ವರ್ತಕರಿಂದ ದೊಡ್ಡ ಮೊತ್ತದ ದಂಡ ವಸೂಲಿ ಮಾಡಿದ್ದರು. ಈ ಪ್ರಕರಣವನ್ನು 'ಕನ್ನಡಪ್ರಭ' ವರದಿ ಮಾಡಿತ್ತು.
ಕಾರಿನಲ್ಲಿ ಸಂಚಾರ: ಈ ಪ್ರಕರಣದಲ್ಲಿ ಇಬ್ಬರು ವರ್ತಕರು ಪಾರಾಗಿದ್ದು, ವಿಶೇಷ ಎಪಿಎಂಸಿ ಆಡಳಿತದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಇನ್ನೆರಡು ತಿಂಗಳಲ್ಲಿ ಕೆಲ ಉದ್ಯಮಿಗಳಿಗೆ ಇರುವ ವಿನಾಯ್ತಿ ಅವಧಿ ಮುಗಿಯಲಿದೆ. ಆಗ ಶುಲ್ಕ ಮೊತ್ತ ಹೆಚ್ಚಾಗುವ ನಿರೀಕ್ಷೆ ಇದೆ. ಆದರೆ, ಕಳ್ಳ ವರ್ತಕರ ನಕಲಿ ಇ-ಪರ್ಮಿಟ್ ಪ್ರಕರಣವನ್ನು ಇದುವರೆಗೂ ಎಪಿಎಂಸಿ ಆಡಳಿತ ಮಂಡಳಿ, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ಇರುವುದು ಅನುಮಾನಕ್ಕೆ ಎಡೆ ಮಾಡಿದೆ. ತನಿಖೆ ಮಾಡಿ ಕಳ್ಳ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಅಕ್ಕಿ ಕಳ್ಳರ ಕಾರುಗಳಲ್ಲಿ ಸಿಂಧನೂರಿಗೆ ಓಡಾಡುತ್ತಿರುವುದು ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಂತಾಗಿದೆ.
ಎ.ಜಿ. ಕಾರಟಗಿ