ಅತಿಥಿ ಸತ್ಕಾರಕ್ಕೆ ಸಿದ್ಧವಾಗುತ್ತಿದೆ ಹಪ್ಪಳ, ಸಂಡಿಗೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 13
ಬೇಸಿಗೆ ಬಂತೆಂದರೆ ಸಾಕು ಅಬ್ಬಬ್ಬಾ ಇದೆಂತಹ ಬಿರುಬಿಸಿಲು ಎಂಬ ಬೇಸರದ ಮನೋಭಾವ ಕೆಲವರದಾದರೆ, ಇನ್ನು ಕೆಲವರಿಗೆ ಬಿಸಿಲಿನ ಪ್ರಖರತೆ ಎಂದರೆ ಖುಷಿಯೋ ಖುಷಿ.
ಹೌದು, ಬಿಸಿಲನಗರಿ ಬಳ್ಳಾರಿಯ ಜನತೆಗೆ ಕೆಂಡದಂತಹ ಬಿರುಬಿಸಿಲು ಸಹಜ ಆದರೆ, ಸದಾ ಒಂದಲ್ಲ ಒಂದು ಕಾರ್ಯಚಟುವಟಿಕೆಗಳಲ್ಲಿ ತಲ್ಲೀನರಾಗುವ ಇಲ್ಲಿನ ಗ್ರಾಮೀಣ ಭಾಗದ ಮಹಿಳೆಯರಿಗೆ ಬೇಸಿಗೆಯ ಬಿಸಿಲೆಂದರೆ ತಟ್ಟನೆ ನೆನಪಿಗೆ ಬರುವುದೇ ಸಂಡಿಗೆ, ಅಪ್ಪಳ, ಶ್ಯಾವಿಗೆ, ಉಪ್ಪಿನಕಾಯಿ ಹೀಗೆ ಇಡೀ ವರ್ಷಕ್ಕಾಗುವಷ್ಟು ಈ ಪದಾರ್ಥಗಳ ತಯಾರಿಕೆಗೆ ಅವರದು ಪ್ರಥಮ ಆದ್ಯತೆ. ಆದರೆ ನಗರ ಪ್ರದೇಶಗಳಲ್ಲಿ ಇವುಗಳ ತಯಾರಿಕೆ ಕ್ಷೀಣಿಸುತ್ತಿದ್ದು, ಇಂದಿನ ರೆಡಿಮೇಡ್ ಫುಡ್ ಐಟೆಂಮ್ಸ್‌ಗಳ ಈ ಜಮಾನದಲ್ಲಿ ದೇಸೀ ಸೊಗಡು ಕಣ್ಮರೆಯಾಗುತ್ತಿದೆ.
ಹಬ್ಬ, ಹರಿದಿನಗಳಲ್ಲಿ, ಮದುವೆ, ನಾಮಕರಣ, ಸೀಮಂತ, ಅತಿಥಿಗಳ ಸತ್ಕಾರ ಹೀಗೆ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭೋಜನಕ್ಕೆಂದು ತಯಾರಿಸುವ ಬಗೆಬಗೆಯ ಖಾದ್ಯಗಳೊಂದಿಗೆ ಸಂಡಿಗೆ, ಹಪ್ಪಳಗಳಿಲ್ಲದಿದ್ದರೆ ಆ ಸಮಾರಂಭ ಅಪೂರ್ಣ. ಅದಕ್ಕಾಗಿಯೇ ಅನೇಕ ಮಹಿಳೆಯರು ಬೇಸಿಗೆ ದಿನಗಳಾದ ಏಪ್ರಿಲ್, ಮೇ ತಿಂಗಳುಗಳಲ್ಲಿ ಸಕಲ ಪೂರ್ವ ಸಿದ್ಧತೆಗಳೊಂದಿಗೆ ಇವುಗಳ ತಯಾರಿಕೆಯ ಕಾರ್ಯದಲ್ಲಿ ನಿರತರಾಗುತ್ತಾರೆ.
ಬೇಸಿಗೆಯ ಬಿಸಿಲಿನ ಪ್ರಖರತೆಗೆ ಚೆನ್ನಾಗಿ ಒಣಗುವ ಆಹಾರ ಪದಾರ್ಥಗಳು ಬಹಳ ದಿನಗಳವರೆಗೂ ಕೆಡುವುದಿಲ್ಲ ಎಂಬ ಕಾರಣಕ್ಕಾಗಿ ಹೊಲಗಳಲ್ಲಿಯ ಕೆಲಸಕಾರ್ಯಗಳನ್ನು ಮುಗಿಸಿ, ನಂತರ ಮಹಿಳೆಯರು ಈ ಬೇಸಿಗೆಯ ದಿನಗಳಲ್ಲಿ ಸಂಡಿಗೆ, ಹಪ್ಪಳ, ಶ್ಯಾವಿಗೆಯಂತಹ ಹಲವು ಬಗೆಯ ಪದಾರ್ಥಗಳ ತಯಾರಿಸುವಿಕೆಯ ದೃಶ್ಯ ಈಗ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
ಹಪ್ಪಳ ಇನ್ನೂ ಜೀವಂತ: ಈ ಹಿಂದೆ ಮಹಿಳೆಯರು, ಅಜ್ಜಿಯಂದಿರು ಓಣಿಯಲ್ಲಿ ನಾಲ್ಕಾರು ಕುಟುಂಬದ ಮಹಿಳೆಯರೊಂದಿಗೆ ಬೆರೆತು ಮನೆಯ ಮಾಳಿಗೆಯ ಮೇಲೆ ಸಂಡಿಗೆಯ ಅಚ್ಚುಗಳನ್ನು ಹಿಡಿದು ವಿವಿಧ ಆಕಾರಗಳ ರುಚಿಕರವಾದ ಸಂಡಿಗೆ ಹಾಕಿದರೆ, ಅನಂತರ ಮಧ್ಯಾಹ್ನ ಹಾಗೂ ಸಂಜೆಯ ವೇಳೆಯಲ್ಲಿ ಧಾನ್ಯಗಳ ಹಪ್ಪಳಗಳ ಲಟ್ಟಿಸುವಿಕೆಯಲ್ಲಿ ಮಗ್ನರಾಗಿರುತ್ತಿದ್ದರು. ಆದರೆ ಇದೀಗ ಆ ಲಟ್ಟಿಸುವಿಕೆಯ ಶಬ್ಧ, ಬೆಳ್ಳಂಬೆಳಗ್ಗೆ ಮನೆಗಳ ಮಾಳಿಗೆಯ ಮೇಲೆ ಸೂರ್ಯನ ಬಿಸಿಲಿನ ಪ್ರಖರತೆಯಲ್ಲಿ ಸಂಡಿಗೆ ಹಾಕುತ್ತಿದ್ದ ದಿನಗಳು ಇಂದಿನ ಆಧುನೀಕತೆಯ ಅಬ್ಬರದಿಂದಾಗಿ ನಗರ ಪ್ರದೇಶಗಳಲ್ಲಿ ಮರೆಯಾಗುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಜೀವಂತವಾಗಿವೆ.
ಸಾಕಷ್ಟು ಶ್ರಮ ಅಗತ್ಯ: ಸಂಡಿಗೆ ತಯಾರಿಸುವುದು ಸುಲಭದ ಕೆಲಸವಲ್ಲ. ಇದಕ್ಕೆ ತಾಳ್ಮೆ ಅತಿಮುಖ್ಯ. ಮೂರ್ನಾಲ್ಕು ದಿನಗಳ ಕಾಲ ಅಕ್ಕಿಯನ್ನು ಹುಳಿಬರುವವರೆಗೂ ನೀರಿನಲ್ಲಿ ನೆನೆಸಿ, ನಂತರ ಅದನ್ನು ರುಬ್ಬಿ, ಹದಬರುವವರೆಗೂ ಬೇಯಿಸಿಕೊಂಡು ತದನಂತರ ಸಂಡಿಗೆ ಹಾಕಲು ಮುಂದಾಗಬಹುದು. ಸಂಡಿಗೆ ತಯಾರಿಕೆಗೆ ಇದಿಷ್ಟೇ ಕೆಲಸವಾ ಎಂದು ಭಾವಿಸಬೇಡಿ, ಅವು ಕನಿಷ್ಠ ಪಕ್ಷ ನಾಲ್ಕು, ಐದು ದಿನಗಳವರೆಗೆ ಇವುಗಳನ್ನು ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಬಟ್ಟೆಯಿಂದ ಬಿಡಿಸಿ, ಸ್ವಚ್ಛವಾದ ಡಬ್ಬಿಗಳಲ್ಲಿ ಶೇಖರಿಸಿಟ್ಟ ನಂತರ ಆ ಕಾರ್ಯ ಪೂರ್ಣಗೊಳ್ಳುತ್ತದೆ.
ಉದ್ದು, ಅಲಸಂದಿ, ಹೆಸರು, ಮಡಕಿ, ಅಕ್ಕಿ, ಗೋದಿ, ಗೋಂಜೋಳ, ರಾಗಿ, ಸಾಬುದಾನಿಗಳಿಂದ ವಿಶೇಷ ಕ್ರಮದಿಂದ ಹಿಟ್ಟು ತಯಾರಿಸಿ, ಮಣೆಯ ಮೇಲೆ ಉದ್ದಿ ಬಿಸಿಲಲ್ಲಿ ಒಣಗಿಸಿ ಮತ್ತು ತಟ್ಟೆಯಲ್ಲಿ ಹಾಕಿ ಉರಿಯ ಮೇಲೆಯೂ ಬೇಯಿಸುತ್ತಾರೆ. ಇದಕ್ಕೆ ಮೂರ್ನಾಲ್ಕು ಜನ ಬೆರೆತು ಮಾಡಿದಲ್ಲಿ ಅಲ್ಪ ಸಮಯದಲ್ಲೇ ಹಪ್ಪಳ ತಯಾರಿಸಬಹುದು.
- ವೈ.ಎಂ. ಸಿದ್ಧಲಿಂಗಸ್ವಾಮಿ